ಹೊಸನಗರ ವಿಧಾನಸಭಾ ಕ್ಷೇತ್ರ ರಚನೆಗೆ ಒತ್ತಾಯಿಸಿ ಜನಜಾಗೃತಿ ಅಭಿಯಾನ‌ ; ಮೂಲೆಗದ್ದೆ ಶ್ರೀಗಳು

0 741

ಹೊಸನಗರ : ಹೊಸನಗರ (Hosanagara) ತಾಲೂಕಿಗೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಸಿದ್ದಗೊಂಡಿದೆ. ಇದರ ಅಂಗವಾಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕಳೆದ ವಾರ ಬಟ್ಟೆಮಲ್ಲಪ್ಪದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊಸನಗರ ಕ್ಷೇತ್ರ ಪುನರಚನೆ ಕುರಿತು ಜಾಗೃತಿ ಮೂಡಿಸುವ ಸ್ಥಬ್ದಚಿತ್ರ ಪ್ರದರ್ಶನ ನಡೆಯಿತು. ಸಮ್ಮೇಳನದಲ್ಲಿಯೂ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಇಡೀ ತಾಲೂಕಿನ ಜನರನ್ನು ಈ ದಿಸೆಯಲ್ಲಿ ಹೋರಾಟಕ್ಕೆ ಅಣಿಗೊಳಿಸಬೇಕಿದೆ. ಜಾಗೃತಿ ಮೂಡಿಸುವ ಸಲುವಾಗಿ ಸ್ಥಬ್ಧ ಚಿತ್ರ ಬುಧವಾರದಿಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಲಿದೆ. ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳಿಂದ ಬೆಂಬಲ ಕೋರಲಾಗುವುದು ಎಂದರು.

ಕ್ಷೇತ್ರ ಮರುವಿಂಗಡಣೆ ಸಂದರ್ಭದಲ್ಲಿ ಹೊಸನಗರ ತಾಲೂಕು ಇಬ್ಬಾಗವಾಗಿ ಎರಡು ಕ್ಷೇತ್ರಗಳಿಗೆ ಹಂಚಿ ಹೋಗಿರುವುದು ತಾಲೂಕಿನ ಜನತೆಗೆ ಆದ ಅನ್ಯಾಯ ಹೊಸನಗರ ತಾಲೂಕು ಪಶ್ಚಿಮಘಟ್ಟ ಪ್ರದೇಶದಲ್ಲಿದ್ದು, ಐದು ಬಾರಿ ಮುಳುಗಡೆ ಹೊಂದಿದೆ. ಇಂದಿಗೂ ಮುಳುಗಡೆಯಿಂದ ಜನರ ಬದುಕಲ್ಲಿ ಉಂಟಾದ ತಲ್ಲಣಗಳು ಶಮನಗೊಂಡಿಲ್ಲ. ಅಭಿವೃದ್ಧಿ ಕರ‍್ಯಗಳಿಗೆ ಹಿನ್ನೆಡೆಯಾಗಿದೆ. ಮೂಲಸೌಕರ್ಯಗಳಿಲ್ಲದೇ ಗ್ರಾಮೀಣ ಜನತೆ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ತಾಲೂಕಿಗೆ ಇದ್ದ ವಿಧಾನಸಭಾ ಕ್ಷೇತ್ರದ ಮಾನ್ಯತೆ ರದ್ದಾಗಿರುವುದು ತುಂಬಲಾರದ ನಷ್ಟವಾಗಿದೆ. ಸಮಗ್ರ ಅಭಿವೃದ್ಧಿ ಹಾಗೂ ಜನಹಿತನ್ನು ಮನದಲ್ಲಿಟ್ಟುಕೊಂಡು ಹೊಸನಗರವನ್ನು ಮತ್ತೊಮ್ಮೆ ವಿಧಾನಸಭಾ ಕ್ಷೇತ್ರವನ್ನಾಗಿ ರೂಪುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಕ್ಷೇತ್ರ ಪುನರ್‌ರಚನೆ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ಎಸ್ ಬ್ಯಾಣದ್, ವಿವಿಧ ಸಂಘ ಸಂಸ್ಥೆಯ ಪ್ರಮುಖರಾದ ಬಿ.ಎಸ್.ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರ ಒಕ್ಕೂಟದ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಸದಸ್ಯರಾದ ಶಂಕರಶೆಟ್ಟಿ, ಚಿದಂಬರ, ಕರುಣಾಕರ ಶೆಟ್ಟಿ, ಗುರೂಜಿ ಶಾಲೆಯ ಶಾಂತಮೂರ್ತಿ, ಹಿಲ್ಕುಂಜಿ ಕುಮಾರ್, ಪ್ರವೀಣ ಮತ್ತಿತರರು ಇದ್ದರು.

ಹೊಸನಗರ ತಾಲೂಕು‌ ಸಾಹಿತ್ಯ ಕನ್ನಡ ಸಮ್ಮೇಳನದ ಅಂಗವಾಗಿ ಹೊಸನಗರ ವಿಧಾನಸಭಾ ಕ್ಷೇತ್ರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನೂಲಿಗ್ಗೇರಿ ಗೆಳೆಯರ ಬಳಗ ನಿರ್ಮಿಸಿದ ಆಕರ್ಷಕ, ಅರ್ಥಪೂರ್ಣ ಸ್ತಬ್ಧಚಿತ್ರ ಗಮನ ಸೆಳೆದಿತ್ತು.
ಸ್ತಬ್ಧಚಿತ್ರದ ಪ್ರೇರಣೆ ಮತ್ತು ಮೂಲೆಗದ್ದೆ ಶ್ರೀಗಳ ಆಶಯ ಸಮ್ಮಿಳಿತಗೊಂಡು‌ ಹೋರಾಟ ಹೊಸರೂಪಕ್ಕೆ ಕಾಲಿಟ್ಟಿದೆ. ಹೊಸನಗರ ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಸ್ತಬ್ಧಚಿತ್ರವನ್ನು ಬಳಸಿಕೊಂಡು‌ ಕ್ಷೇತ್ರ ಮರುಸ್ಥಾಪನೆ ಬಗ್ಗೆ ಜಾಗೃತಿ ಮೂಡಿಸಲು‌ ತೀರ್ಮಾನಿಸಲಾಗಿದೆ.
ಈ‌ ಹಿಂದೆ ಶರಾವತಿ‌ ಹೋರಾಟದಲ್ಲೂ ಶ್ರೀಗಳ ಆಶಯ ನೂಲಿಗ್ಗೇರಿ ಗೆಳೆಯರ ಬಳಗದ ಸ್ತಬ್ಧಚಿತ್ರ ಬೆಸೆದಿತ್ತು, ಅಂದು ಸ್ತಬ್ಧ ಚಿತ್ರ ಜಿಲ್ಲಾ ಕೇಂದ್ರದವರೆಗೆ ಸಾಗಿದ ಬೃಹತ್ ಮೆರವಣಿಗೆಯ ಕೇಂದ್ರ ಬಿಂದು ಆಗ ಗಮನ ಸೆಳೆದಿತ್ತು.
ಇದೀಗ ಅದೇ ಮಾದರಿಯ ಹೋರಾಟ ಆರಂಭಗೊಂಡಿದ್ದು ಎರಡು ಕೈ ಜೋಡಿಸಿ‌ ಕ್ಷೇತ್ರವನ್ನು ಬೇಡುವ ಮಾದರಿಯಲ್ಲಿ ನಿರ್ಮಾಣ ಕಂಡ ಸ್ತಬ್ಧಚಿತ್ರ 30 ಗ್ರಾ.ಪಂ‌ ವ್ಯಾಪ್ತಿಯ 400 ಕಿ.ಮೀ ಸಂಚರಿಸಲಿದೆ. ನೂಲಿಗ್ಗೇರಿ ಗೆಳೆಯರ ಬಳಗದ ಕಾಳಜಿ ಪ್ರಶಂಸೆಗೆ ಪಾತ್ರವಾಗಿದೆ.

Leave A Reply

Your email address will not be published.

error: Content is protected !!