ದುಂಬಿಯನ್ನು ಹತೋಟಿಯಲ್ಲಿಟ್ಟು ತೆಂಗು ಬೆಳೆಯನ್ನು ರಕ್ಷಿಸಬೇಕಿದೆ ; ಡಾ. ಲತಾ

0 667

ರಿಪ್ಪನ್‌ಪೇಟೆ : ತೆಂಗು ಬೆಳೆಯಲ್ಲಿ ರೈನೋಸಿರಸ್ ದುಂಬಿಯ ಕೀಟಬಾಧೆಯು ಹೆಚ್ಚಾಗಿದ್ದು , ತೆಂಗು ಬೆಳೆಯ ಇಳುವರಿ ಕಡಿಮೆಯಾಗುವುದರ ಜೊತೆಗೆ ಅನೇಕ ಮರಗಳು ಸಾವಿಗೀಡಾಗುತ್ತಿವೆ. ಆದುದರಿಂದ ದುಂಬಿಯನ್ನು ಹತೋಟಿಯಲ್ಲಿಟ್ಟು ತೆಂಗು ಬೆಳೆಯನ್ನು ರಕ್ಷಿಸಬೇಕಿದೆ ಎಂದು ಕೃಷಿ ವಿವಿಯ ವಿಜ್ಞಾನಿ ಡಾ.ಲತಾ ಹೇಳಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ಬಿ.ಎಸ್ಸಿ ಕೃಷಿಯ ಗಂಧದಗುಡಿ ತಂಡದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಡಿಯಲ್ಲಿ ಕೋಡೂರಿನಲ್ಲಿ ಹಮ್ಮಿಕೊಂಡಿದ್ದಮತ್ತು ಚಿಗುರು ತಂಡದ ವಿದ್ಯಾರ್ಥಿಗಳು ಗವಟೂರಿನಲ್ಲಿ ಹಮ್ಮಿಕೊಂಡಿದ್ದ ರೈನೋಸಿರಸ್ ಕೀಟಬಾಧೆಯ ನಿರ್ವಹಣೆಯ ಕ್ರಮವಾದ ಬೇರುಣ್ಣಿಸುವ ವಿಧಾನದ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.

ರೈನೋಸಿರಸ್ ದುಂಬಿಯ 1ನೇ ಹಂತದ ಮರಿಗಳು ಮೃದುವಾದ ಬೇರುಗಳನ್ನು ತಿನ್ನುತ್ತವೆ. ಪ್ರೌಢ ದುಂಬಿಗಳು ತೆಂಗು ಬೆಳೆಯ ಸುಳಿಯ ಭಾಗವನ್ನು ಹೊಂಬಾಳೆಯನ್ನು ಹಾಗೂ ಮೃದುವಾದ ಕಾಂಡವನ್ನು ತಿನ್ನುತ್ತವೆ. ಕೊರೆದ ಭಾಗಗಳಲ್ಲಿ ನಾರಿನಂತಹ ಪದಾರ್ಥಗಳು ರಂಧ್ರದ ಮೂಲಕ ಹೊರಬರುತ್ತದೆ ಹಾಗೂ ಎಲೆಗಳನ್ನು “ವಿ” ಆಕಾದಲ್ಲಿ ಕತ್ತರಿಯಿಂದ ಕತ್ತರಿಸಿದಂತೆ ಕೊರೆಯುತ್ತದೆ” ಎಂದು ದುಂಬಿಯ ಲಕ್ಷಣಗಳನ್ನು ತಿಳಿಸಿದರು.

ಬೇರುಣ್ಣಿಸುವ ವಿಧಾನವು ರೈನೋಸಿರಸ್ ನಿರ್ವಹಣೆ ಪ್ರಮುಖ ವಿಧಾನವಾಗಿದೆ. ಮುಖ್ಯ ಕಾಂಡದಿಂದ 2 ರಿಂದ 3 ಅಡಿ ದೂರದಲ್ಲಿ , 1 ಅಡಿ ಆಳದ ಗುಂಡಿಯನ್ನು ತೆಗೆದು ಪೆನ್ಸಿಲ್ ನಷ್ಟು ದಪ್ಪವಿರುವ ಸಕ್ರಿಯವಾಗಿರುವ ಗಾಢ ಕಂದುಬಣ್ಣದ ಬೇರನ್ನು ಆಯ್ಕೆ ಮಾಡಿಕೊಂಡು ಓರೆಯಾಗಿ ಕತ್ತರಿಸಬೇಕು. ಕತ್ತರಿಸಿದ ಬೇರನ್ನು 10 ಮಿ.ಲೀ ಕ್ಲೋರ್ ಪೈರಿಫೋಸ್ ಹಾಗೂ 10ಮಿ.ಲೀ ನೀರಿರುವ ಪಾಲಿಥಿನ್ ಬ್ಯಾಗ್ ನಲ್ಲಿ ಮುಳುಗಿಸಬೇಕು ಎಂದು ಪ್ರಾಯೋಗಿಕವಾಗಿ ರೈತರಿಗೆ ತೋರಿಸಲಾಯಿತು.

ಪ್ರಾತ್ಯಕ್ಷಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಡಾ. ಸತೀಶ್, 24 ಗಂಟೆಗಳಲ್ಲಿ ಬೇರು ರಾಸಾಯನಿಕವನ್ನು ತೆಗೆದುಕೊಂಡಿರುತ್ತದೆ‌. ತೆಗೆದುಕೊಳ್ಳಲು ವಿಫಲವಾದರೆ ಮತ್ತೊಂದು ಬೇರನ್ನು ಆಯ್ಕೆ ಮಾಡಿಕೊಂಡು ಪುನಃ ವಿಧಾನವನ್ನು ಮಾಡಬೇಕು. ಬೇರುಣ್ಣಿಸುವ ವಿಧಾನ ಮಾಡುವ ಮೊದಲು ಪಕ್ವ ಕಾಯಿಗಳನ್ನು ಕೊಯ್ಲು ಮಾಡಬೇಕು ಹಾಗೂ ಬೇರುಣ್ಣಿಸಿದ ನಂತರ 45 ದಿನಗಳವರೆಗೆ ಕೊಯ್ಲು ಮಾಡಬಾರದು. ತೆಂಗಿನಲ್ಲಿ ಕಂಡುಬರುವ ಬೇರೆ ಪ್ರಮುಖ ಕೀಟಗಳ ಬಾಧೆಗೂ ಈ ವಿಧಾನ ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

Leave A Reply

Your email address will not be published.

error: Content is protected !!