ವೃದ್ಧೆಯನ್ನು ಕೊಲೆಗೈದು ಹುಂಚ ಮುತ್ತಿನಕೆರೆಗೆ ಶವ ಎಸೆದಿದ್ದ ಹಂತಕರು ಅಂದರ್ !

0 5,974

ರಿಪ್ಪನ್‌ಪೇಟೆ : ವೃದ್ಧೆಯನ್ನು ಕೊಲೆಗೈದು ಹುಂಚದ ಮುತ್ತಿನಕೆರೆಗೆ ಶವ ಎಸೆದಿದ್ದ ಹಂತಕರನ್ನು ಬಂಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಜಯಮ್ಮ (62) ಎಂಬುವವರನ್ನು ಕೋಡೂರು ನಿವಾಸಿ ಮಯೂರ ಕೆ. (24) ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಸೇರಿಕೊಂಡು ಆಕೆಯ ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದು ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನಾ ವಿವರ :
ಮಾ.18 ರಂದು ಹುಂಚ ಗ್ರಾಮದ ಮುತ್ತಿನಕೆರೆಯಲ್ಲಿ ಅಪರಿಚಿತ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪ್ರಕರಣವನ್ನು ಕೈಗೆತ್ತಿಕೊಂಡ ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ಹಾಗೂ ಪಿಎಸ್‌ಐ ನಿಂಗರಾಜ್ ಕೆ ವೈ ನೇತೃತ್ವದ ಸಿಬ್ಬಂದಿಗಳ ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು‌

ಈ ಪ್ರಕರಣದಲ್ಲಿ ರಿಪ್ಪನ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡೂರು ಗ್ರಾಪಂ ವ್ಯಾಪ್ತಿಯ ಯಳಗಲ್ಲು ಗ್ರಾಮದ ಮಯೂರ ಕೆ. (24) ಈತನು ತನ್ನ ಅಪ್ರಾಪ್ತ ಸ್ನೇಹಿತನೊಂದಿಗೆ ಹಣ ಹಾಗೂ ಬಂಗಾರದ ಆಸೆಯಿಂದ ತನ್ನ ಅತ್ತೆ ಹೊಳಲೂರು ಗ್ರಾಮದ ಸೀತಾರ ರವರು ಕೆಲಸ ಮಾಡುತ್ತಿದ್ದ ಮಠದಲ್ಲಿ, ಕಸಗುಡಿಸುವ ಕೆಲಸ ಮಾಡುತ್ತಿದ್ದ ಜಯಮ್ಮ ಕೋಂ ಕುಮಾರ (62) ರವರ ಹತ್ತಿರ ಕೈಸಾಲವಾಗಿ ಹಣ ತೆಗೆದುಕೊಂಡು ಅದನ್ನು ವಾಪಾಸ್ ಕೊಡಲಾಗದೆ ಆಕೆಯ ಹತ್ತಿರ ಹಣ ಮತ್ತು ಬಂಗಾರವಿರುವುದನ್ನು ಗಮನಿಸಿ ಬುದ್ಧಿವಂತಿಕೆಯಿಂದ ರಿಪ್ಪನ್‌ಪೇಟೆಯಲ್ಲಿ ಸೈಟ್ ಕೊಡಿಸುವುದಾಗಿ ನಂಬಿಸಿ ರಿಪ್ಪನ್‌ಪೇಟೆಗೆ ಕರೆದುಕೊಂಡು ಬಂದು ನಂತರ ಮಾರುತಿ ವ್ಯಾಗನಾರ್ ಕಾರಿನಲ್ಲಿ ಕೂರಿಸಿಕೊಂಡು ಬಾಳೂರು ಗ್ರಾಮದ ಹತ್ತಿರ ಕಾರಿನಲಿಯೇ ಹಿಂಬದಿಯಿಂದ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಕೊಲೆಯನ್ನು ಮರೆ ಮಾಚುವ ಉದ್ದೇಶದಿಂದ ಬೇಲಿ ಕಂಬದ ಕಲ್ಲನ್ನು ಜೊತೆಗೆ ಪ್ಲಾಸ್ಟಿಕ್‌ ಹಗ್ಗದಿಂದ ಸುತ್ತಿ ಬಿಗಿದು ಅದೇ ದಿನ ರಾತ್ರಿ ಸುಮಾರು 10:45ರ ಸುಮಾರಿಗೆ ಹುಂಚ ಮುತ್ತಿನಕೆರೆಯಲ್ಲಿ ಮೃತದೇಹವನ್ನು ಬಿಸಾಕಿ ಹೋಗಿದ್ದರು.

ಎಸ್ಪಿ ಮತ್ತು ಎಎಸ್ಪಿ ಹಾಗೂ ಡಿವೈಎಸ್ ಪಿ ಗಜಾನನ ವಾಮನ ಸುತಾರ ನಿರ್ದೇಶನದಲ್ಲಿ ಸಿಪಿಐ ಜಿ‌.ಎಸ್ ಹೆಬ್ಬಾಳ್ ರವರು ಮತ್ತು ಚಾಣಾಕ್ಷ ಅಧಿಕಾರಿ ರಿಪ್ಪನ್‌ಪೇಟೆ ಠಾಣಾ ಪಿಎಸ್ಐ ನಿಂಗರಾಜ್ ಕೆ ವೈ ನೇತೃತ್ವದಲ್ಲಿ ಸಿಬ್ಬಂದಿಯವರಾದ ನಗರ ಠಾಣೆಯ ಕಿರಣ್ ಕುಮಾರ, ರಿಪ್ಪನ್‌ಪೇಟೆ ಠಾಣೆಯ ಶಿವಕುಮಾರ ನಾಯ್ಕ್, ಸಂತೋಷ್ ಕೊರವರ, ಹೊಸನಗರ ಠಾಣೆಯ ಸುನೀಲ್ ರಿಪ್ಪನ್‌ಪೇಟೆ ಠಾಣೆಯ ಉಮೇಶ್ ಹೆಚ್ ಸಿ ರವರನೊಳಗೊಂಡ ತಂಡವು ತೀವ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.

error: Content is protected !!