ಸೆ.25 ರಂದು ಧರಣಿ ಸತ್ಯಾಗ್ರಹ | ಇಡೀ ರಾಜ್ಯವನ್ನು ಬರಗಾಲ ಎಂದು ಘೋಷಿಸಿ ರೈತರ ಸಾಲ ವಸೂಲಾತಿ ಕಿರುಕುಳ ನಿಲ್ಲಸಿ ; ಹೆಚ್.ಆರ್ ಬಸವರಾಜಪ್ಪ

0 59

ಶಿವಮೊಗ್ಗ: ಇಡೀ ರಾಜ್ಯವನ್ನು ಬರಗಾಲ ಎಂದು ಘೋಷಿಸಬೇಕು. ರೈತರ ಸಾಲ ವಸೂಲಾತಿ ಕಿರುಕುಳ ನಿಲ್ಲಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸೆ.25ರಂದು ಬೆ.11ರಿಂದ ಸಂಜೆ 4ರವರೆಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ರೈತಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.


ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬರಗಾಲ ಕಾಲಿಟ್ಟಿದೆ. ರೈತರ ಬೆಳೆ ಒಣಗಿದೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ರೈತರು ನಿರೀಕ್ಷೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಬದಲ್ಲಿ ರಾಜ್ಯ ಸರ್ಕಾರ ಕೇವಲ 161 ತಾಲೂಕುಗಳನ್ನು ಮಾತ್ರ ಬರಗಾಲ ಎಂದು ಘೋಷಣೆ ಮಾಡದೆ ಉಳಿದ 74 ತಾಲೂಕುಗಳನ್ನೂ ಬರಗಾಲ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.


ರಾಜ್ಯ ಸರ್ಕಾರ ರೈತರ ಸಂಕಷ್ಟಗಳನ್ನು ಮರೆತಿದೆ. ಗ್ಯಾರಂಟಿಗಳೇ ಅವರಿಗೆ ಮುಖ್ಯವಾಗಿದೆ. ವಿರೋಧ ಪಕ್ಷಗಳು ತಮ್ಮ ಜವಾಬ್ದಾರಿ ಮರೆತಿವೆ. ಮುಂದಿನ ಲೋಕಸಭೆ ಚುನಾವಣೆಯ ಹವಣಿಕೆಯಲ್ಲಿದ್ದಾರೆ. ಇದರ ನಡುವೆ ಬ್ಯಾಂಕುಗಳು, ಫೈನಾನ್ಸ್ ಗಳು ಸಾಲ ವಸೂಲಾತಿಗಾಗಿ ರೈತರಿಗೆ ಕರುಕುಳ ನೀಡುತ್ತಿವೆ. ರೈತ ನಿಜಕ್ಕೂ ಸಂಕಷ್ಟದಲ್ಲಿದ್ದಾನೆ. ಆತನ ನೆರವಿಗೆ ಸರ್ಕಾರ ತಕ್ಷಣ ಬರಬೇಕು ಎಂದರು.


ಇಡೀ ರಾಜ್ಯವನ್ನು ಬರಗಾಲ ಎಂದು ಘೋಷಿಸಬೇಕು. ರೈತರಿಗೆ  ಬೆಳೆ ಪರಿಹಾರವಾಗಿ ಎಕರೆಗೆ 25ಸಾವಿರ ರೂ. ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಬೇಕು. ಸುಟ್ಟುಹೋದ ಟಿಸಿಗಳನ್ನು ತಕ್ಷಣ ಬದಲಿಸಬೇಕು. ರೈತರ ಎಲ್ಲಾ ರೀತಿಯ ಸಾಲ ವಸೂಲಾತಿಯನ್ನು ತಡೆ ಹಿಡಿಯಬೇಕು. ಸಾಲ ಮನ್ನಾ ಮಾಡಬೇಕು. ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು. ಬೆಳೆ ವಿಮೆ ಪಡೆದುಕೊಂಡ ಕಂಪೆನಿಗಳು ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಪಿ.ಡಿ.ಮಂಜಪ್ಪ, ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಇದ್ದರು.

Leave A Reply

Your email address will not be published.

error: Content is protected !!