ಸಾಗರ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 206 (ಎನ್ಎಚ್206) ಅಗಲೀಕರಣ ಕಾಮಗಾರಿಯಲ್ಲಿ ಸಂಸದರ ಹಸ್ತಕ್ಷೇಪ ಸಹಿಸಲಾಗುವುದಿಲ್ಲ ಎಂದು ಶಾಸಕ ಮತ್ತು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಕಾಂಪ್ಲೆಕ್ಸ್ಗಳ ಹತ್ತಿರದ ಕೆಲವರು ಸಂಸದರ ಬಳಿ ದೂರು ನೀಡಿ ತಮ್ಮ ಜಾಗ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನನಗೆ ಇದೆ. ಇಂತಹ ಶಾಶ್ವತ ಕಾಮಗಾರಿಗೆ ರಾಜಕೀಯ ಹಸ್ತಕ್ಷೇಪದಿಂದ ಊರಿನ ಸುಂದರತೆ ಹಾಳಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಯಾರೋ ಒಬ್ಬರ ಜಾಗ ಉಳಿಸಲು ಹೋಗಿ ಸಂಪೂರ್ಣ ಯೋಜನೆ ಕೆಡಿಸಿಕೊಳ್ಳುವ ವಿಚಾರ ನನ್ನಿಂದ ಸಾಧ್ಯವಿಲ್ಲ,” ಎಂದು ಅವರು ಸ್ಪಷ್ಟಪಡಿಸಿದರು.
ವಿಳಂಬಕ್ಕೆ ತೀವ್ರ ಆಕ್ರೋಶ:
“ಕಾಮಗಾರಿ ಆರಂಭವಾಗಿ ನಾಲ್ಕು ವರ್ಷ ಕಳೆದಿದೆ. ಜುಲೈ 10ರೊಳಗೆ ಪೂರ್ಣಗೊಳಿಸಬೇಕೆಂಬ ಆದೇಶವಿದ್ದರೂ ಪ್ರಗತಿ ನಿಧಾನವಾಗಿದೆ. ನೀವು ವಿಳಂಬ ಮಾಡುತ್ತಿದ್ದರೆ, ನನ್ನ ಮೇಲೆ ಕೆಟ್ಟ ಹೆಸರು ಬರುತ್ತದೆ. ಇದು ನಾನು ಸಹಿಸಲಾರೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಸೂಚನೆ
- ರಸ್ತೆ, ಡ್ರೈನೇಜ್ ಕೆಲಸಗಳು ತ್ವರಿತಗತಿಯಲ್ಲಿ ಪೂರ್ಣಗೊಳ್ಳಬೇಕು.
- ಪರಿಹಾರ ನೀಡದ ಜಾಗಗಳಲ್ಲಿ ತಕ್ಷಣ ಪರಿಹಾರ ನೀಡಿ, ನಂತರ ಅಗಲೀಕರಣ ಕಾರ್ಯ ಮುಂದುವರಿಸಬೇಕು.
- ಒಂದೆರಡು ಕಡೆ ದೇವರ ಮರ ಎಂದು ಬಿಟ್ಟಿದ್ದೀರಿ. ಮರದಲ್ಲಿರುವ ದೇವರಿಗೆ ಪಕ್ಕದಲ್ಲಿರುವ ಯಾವುದಾದರೂ ಮರದಲ್ಲಿ ಚಿಕ್ಕ ಗುಡಿ ಕಟ್ಟಿಸಿ, ಪ್ರತಿಷ್ಠಾಪನೆ ಮಾಡಿ, ಮರ ಕಡಿತಲೆ ಮಾಡಿ ಎಂದರು.
“ಅರಣ್ಯ ಇಲಾಖೆ, ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಸ್ಪರ ಸಹಕಾರದಿಂದ ಕೆಲಸ ಮುಗಿಸಬೇಕು. ವಿದ್ಯುತ್ ಕಂಬಗಳ ಸ್ಥಳಾಂತರ ಹಾಗೂ ಮರ ಕಡಿತಲೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ಸಾರ್ವಜನಿಕ ಕಚೇರಿಗಳ ಕಾಂಪೌಂಡುಗಳು ಒಡೆದಿದ್ದರೆ ಅವುಗಳನ್ನು ರಿಪೇರಿ ಮಾಡಿ, ಬಣ್ಣ ಹಚ್ಚಿ ಹೊಸದಾಗಿ ತೋರಬೇಕು,” ಎಂದು ಅವರು ಸಲಹೆ ನೀಡಿದರು.
ಪರಿಸರ ಸ್ನೇಹಿ ಹೆದ್ದಾರಿ ಯೋಜನೆ
ಹೆದ್ದಾರಿ ಪಕ್ಕದಲ್ಲಿರುವ ಎಲ್ಲ ಸ್ಥಳಗಳಲ್ಲಿ ಹಸಿರೀಕರಣಕ್ಕೆ ಅವಕಾಶ ಇದ್ದರೆ ಗಿಡ ನೆಟ್ಟು ಬೆಳೆಸುವ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ತಾಕೀತು ಮಾಡಲಾಯಿತು. “ಗ್ರಾಮೀಣ ಭಾಗಗಳಲ್ಲಿ ರಸ್ತೆ ಅಗಲೀಕರಣದ ನಂತರ ಊರಿನ ಹೆಸರಿನ ನಾಮಫಲಕ ಹಾಗೂ ಪ್ರವಾಸಿ ತಾಣಗಳ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಪುನಸ್ಥಾಪನೆ ಮಾಡಬೇಕು” ಎಂದು ಶಾಸಕರು ಸ್ಪಷ್ಟಪಡಿಸಿದರು.
ಮಾರ್ಕೇಟ್ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಆರಂಭ
“ಮುಂದಿನ ಹತ್ತಿ-ಪತ್ತು ದಿನಗಳಲ್ಲಿ ಸಾಗರದ ಮಾರ್ಕೇಟ್ ರಸ್ತೆಯ ಅಗಲೀಕರಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಸ್ಥಳೀಯರು ಸಹಕಾರ ನೀಡಿದ್ದಾರೆ. ಬಿ.ಎಚ್.ರಸ್ತೆ ಸಹ ಪಾಲಾಗಿದ್ದು, ಈ ಎರಡು ರಸ್ತೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು” ಎಂದು ಶಾಸಕರು ಒತ್ತಾಯಿಸಿದರು.
ಕೆಳದಿ ವೃತ್ತದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಕೆಳದಿ ರಾಣಿ ಚೆನ್ನಮ್ಮಾಜಿ ಪುತ್ಥಳಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಕಾರ್ಯಾರಂಭವಾಗಲಿದೆ ಎಂದರು.
ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೋಕೇಶ್, ಮಮತಾ, ರಾಕೇಶ್, ಪಿಡಬ್ಲ್ಯೂಡಿ ವಿಭಾಗದ ಅನಿಲಕುಮಾರ್ ಹಾಗೂ ಶಾಸಕರ ವಿಶೇಷಾಧಿಕಾರಿ ಟಿ.ಎನ್.ಶ್ರೀನಿವಾಸ್ ಸೇರಿ ಹಲವರು ಉಪಸ್ಥಿತರಿದ್ದರು.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650