ರಾಜ್ಯದಲ್ಲಿ ಸುಮಾರು 40 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದಕ್ಕೆ ಖಂಡನೆ

Written by Mahesha Hindlemane

Published on:

ಶಿವಮೊಗ್ಗ ; ರಾಜ್ಯದಲ್ಲಿ ಸುಮಾರು 40,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಎಐಡಿಎಸ್‌ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್)ನ ಜಿಲ್ಲಾ ಸಂಚಾಲಕ ವಿನಯ್‌ಚಂದ್ರ ಹೇಳಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೆ ಅವರು ಮಾಧ್ಯಮದಲ್ಲಿ ಹೇಳುತ್ತಿರುವುದೇ ಒಂದು. ಮತ್ತು ನಡೆದುಕೊಳ್ಳುವುದೇ ಮತ್ತೊಂದು. ಸತ್ಯಾಸತ್ಯತೆಯನ್ನು ಮುಚ್ಚಿಡುತ್ತಿದ್ದಾರೆ. ಸರ್ಕಾರದ ದಾಖಲೆಗಳೇ ಹೇಳುವಂತೆ ಸುಮಾರು 40 ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಕೆಪಿಎಸ್ ಶಾಲೆಯ ಹೆಸರಿನಲ್ಲಿ ಮುಚ್ಚಲು ಮುಂದಾಗಿದೆ. ಗ್ರಾಮ ಪಂಚಾಯ್ತಿಗೆ ಒಂದರಂತೆ ರಾಜ್ಯದಲ್ಲಿ ಸುಮಾರು 6000 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಈಗಾಗಲೇ ಗುರುತಿಸಲಾಗಿದೆ. 800 ಶಾಲೆಗಳನ್ನು ತೆರೆಯುವುದಾಗಿ ಸುತ್ತೋಲೆ ಕೂಡ ಹೊರಡಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಒಂದರಲ್ಲಿಯೇ 1518 ಶಾಲೆಗಳನ್ನು ಮುಚ್ಚಲು ಪಟ್ಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಇನ್ನು ವಿಚಿತ್ರವೆಂದರೆ 500 ಮಕ್ಕಳಿದ್ದರೂ ಕೂಡ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗುತ್ತಿದೆ. ಉದಾಹರಣೆಗೆ ಹುಂಚದ ಬಿಲ್ಲೇಶ್ವರ ಶಾಲೆ, ಸಾಗರದ ತಡಗಳಲೆ ಶಾಲೆ, ಸುಳ್ಳೂರಿನ ಹಿರಿಯ ಪ್ರಾಥಮಿಕ ಶಾಲೆ, ಕಣಸೆಯ ಶಾಲೆ ಇವೆಲ್ಲವನ್ನು ಮುಚ್ಚಲಾಗುತ್ತದೆ. ಹಾಗೆಯೇ 77 ವಿದ್ಯಾರ್ಥಿಗಳಿರುವ ಚನ್ನಪಟ್ಟಣದ ಹಂಗೂರಿನ ಶಾಲೆ, 82 ವಿದ್ಯಾರ್ಥಿಗಳಿರುವ ಹೂಡಿಕೆಹೊಸಳ್ಳಿ ಶಾಲೆ, 100 ವಿದ್ಯಾರ್ಥಿಗಳಿರುವ ಸಂತೆಮೊಗೇನಹಳ್ಳಿ ಶಾಲೆ, 20 ವಿದ್ಯಾರ್ಥಿಗಳಿರುವ ದೊಡ್ಡಿ ಶಾಲೆ, 80 ವಿದ್ಯಾರ್ಥಿಗಳಿರುವ ಸುಣ್ಣಗಟ್ಟ ಶಾಲೆ ಹೀಗೆ ರಾಜ್ಯದಲ್ಲಿ ಹಲವು ಶಾಲೆಗಳು ಈಗಾಗಲೇ ಕೆಪಿಎಸ್ ಶಾಲೆಗಳ ಹೆಸರಿನಲ್ಲಿ ಮುಚ್ಚಿಹೋಗಿವೆ ಎಂದರು.

ಸಚಿವ ಮಧು ಬಂಗಾರಪ್ಪನವರು ಈಗಾಗಲೇ ಕೆಪಿಎಸ್ ಶಾಲೆಗಳ ಬಗ್ಗೆ ಮಾತನಾಡಿದ್ದಾರೆ. ಒಂದು ಮಗುವಿದ್ದರೂ ಕೂಡ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿ, ಈಗ ಸಾವಿರಾರು ಶಾಲೆಗಳನ್ನು ಮುಚ್ಚಲು ಹೊರಟಿರುವುದು ಬಡ ಮಕ್ಕಳಿಂದ ಶಿಕ್ಷಣವನ್ನು ಕಸಿದುಕೊಳ್ಳುವ ಹುನ್ನಾರವೇ ಆಗಿದೆ. ಇದಕ್ಕಾಗಿ ಖಾಸಗಿ ಹಣವನ್ನು ಕೂಡ ಬಳಸಲಾಗುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಯಶವಂತ್
ಇದ್ದರು.

Leave a Comment