HOSANAGARA ; ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆಯಾಗಿ ಸೇವೆ ಸಲ್ಲಿಸುವ ಜೊತೆಗೆ ಸುಮಾರು 3 ಸಾವಿರ ಸಸಿ ನೆಟ್ಟು ಪೋಷಿಸಿ ಹಸಿರು ಸೇನಾನಿ ಎಂದೇ ಖ್ಯಾತರಾಗಿ, 40 ಬಾರಿ ಸ್ವಯಂ ರಕ್ತದಾನ ಮಾಡುವ ಮೂಲಕ ರಕ್ತದಾನದ ಮಹತ್ವ ಸಾರಿ, ಜಿಲ್ಲೆಯ ವಿವಿಧೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಭದ್ರಾವತಿ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರತ ಮುಖ್ಯ ಪೇದೆ ಹಾಲೇಶಪ್ಪ ಅವರ ಸಮಾಜಸೇವೆ ಪರಿಗಣಿಸಿ ಬೆಂಗಳೂರಿನ ಶ್ರೀ ಗಾನಯೋಗಿ ಪುಟ್ಟರಾಜ ಗವಾಯಿ ಮ್ಯೂಸಿಕ್ ಆಕಾಡೆಮಿ(ರಿ) ಇವರು ಸೆಪ್ಟೆಂಬರ್ 22ರ ಭಾನುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ವಿಶೇಷ ಸಮಾರಂಭದಲ್ಲಿ ‘ ಪಂಡಿತ್ ಗಾನಯೋಗಿ ಪುಟ್ಟರಾಜ ಸನ್ಮಾನ್’ ಪ್ರಶಸ್ತಿ ನೀಡಿ ಗೌರವಿಸಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಲೇಶಪ್ಪ, ರಕ್ತದಾನ ಹಾಗೂ ಪರಿಸರ ಸಂರಕ್ಷಣೆ ಹಾಗೂ ಪ್ರಕೃತಿ ಉಳಿಸುವ ಕಾನೂನು ಹೋರಾಟಗಳಲ್ಲಿ ನಾನು ಈವರೆಗೆ ಸಲ್ಲಿಸಿರುವ ಅಳಿಲು ಸೇವೆಯನ್ನು ಗುರುತಿಸಿ ಬೆಂಗಳೂರಿನ ಪಂಡಿತ್ ಪುಟ್ಟರಾಜು ಗವಾಯಿ ಸಂಗೀತ ಅಕಾಡೆಮಿ(ರಿ) ರವರು ಸೆ.22ರಂದು ಬೆಂಗಳೂರಿನ ಪ್ರತಿಷ್ಠಿತ ರವೀಂದ್ರ ಕಲಾಕ್ಷೇತ್ರದಲ್ಲಿ ಪಂಡಿತ್ ಪುಟ್ಟರಾಜು ಗವಾಯಿ ಸಮ್ಮಾನ್ 2024 ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಮಾಜಿಕವಾಗಿ ಸೇವೆ ಸಲ್ಲಿಸುತ್ತಿರುವ ಕರ್ನಾಟಕದ 06 ಜನರಿಗೆ ಪ್ರಶಸ್ತಿ ನೀಡಲಿದ್ದು ಅದರಲ್ಲಿ ನಾನು ಕೂಡ ಒಬ್ಬ ಎಂಬುದು ಖುಷಿಯ ವಿಚಾರ. ಸಾಧಕರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳು ನಮ್ಮ ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ.
ನನ್ನ ಸಾಮಾಜಿಕ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ನಿಮ್ಮಗಳ ಬೆಂಬಲ ಪ್ರೋತ್ಸಾಹ ಹಾಗೂ ಸಹಕಾರವೇ ಕಾರಣ ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಪ್ರಶಸ್ತಿಯನ್ನು ಸ್ವೀಕರಿಸಲು ನಿಮ್ಮೆಲ್ಲರ ಪ್ರತಿನಿಧಿಯಾಗಿ ಹೋಗಲು ಇಚ್ಚಿಸುತ್ತೇನೆ. ನಾನು ನೆಪಮಾತ್ರ. ಈ ಪ್ರಶಸ್ತಿ ಎಲ್ಲಾ ರಕ್ತದಾನಿಗಳಿಗೆ ಹಾಗೂ ಪರಿಸರ ಹೋರಾಟಗಾರರಿಗೆ ಅರ್ಪಣೆ. ಎಂದಿನಂತೆ ಮುಂದೆಯೂ ಕೂಡ ನಿಮ್ಮ ಬೆಂಬಲ ಪ್ರೋತ್ಸಾಹ ಸಹಕಾರ ಸದಾ ಸಿಗಲಿ ಎಂದು ನಾನು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.