ಹೊಸನಗರ ; ತಾಲೂಕಿನ ಕೋಡೂರು ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಸ್ಥಾನದ ಜೀರ್ಣೋದ್ಧಾರ ಕಾರ‍್ಯ ಭರದಿಂದ ಸಾಗಿದ್ದು, ಭಕ್ತಾದಿಗಳು ತನು, ಮನ, ಧನ ಸಹಾಯ ನೀಡುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್ ಕೋರಿದ್ದಾರೆ.
ಶನಿವಾರ ದೇವಸ್ಥಾನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, 2 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯ ದೇಗುಲದ ನಿರ್ಮಾಣ ಕಾರ‍್ಯ ಶೇ.70 ರಷ್ಟು ಪೂರ್ಣಗೊಂಡಿದ್ದು ಜೂನ್ ಅಂತ್ಯದೊಳಗೆ ಲೋಕಾರ್ಪಣೆಗೊಳಿಸುವ ಆಶಯ ವ್ಯಕ್ತಪಡಿಸಿದರು.
ಸುಮಾರು 26 ಪಂಗಡಗಳನ್ನು ಒಳಗೊಂಡ ಈಡಿಗ ಸಮುದಾಯದ ಆರಾಧ್ಯ ದೈವ ಆಗಿದ್ದು, ಪ್ರತಿವರ್ಷ ಪಿತೃಪಕ್ಷದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆ ಭಕ್ತಾದಿಗಳು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ದೇವಿಯ ದರ್ಶನ ಪಡೆದು, ಕೃತಾರ್ಥರಾಗುತ್ತಾರೆ. ನೂತನ ಶಿಲಾಮಯ ದೇಗುಲ ನಿರ್ಮಾಣದಲ್ಲಿ ಗರ್ಭಗುಡಿ, ನವರಂಗ ಕಾರ‍್ಯ ಮುಕ್ತಾಯ ಹಂತದಲ್ಲಿದೆ. ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸ್ವಾಗತ ಮುಖಮಂಟಪ ನಿರ್ಮಾಣ ಕಾರ‍್ಯ ಪ್ರಗತಿಯಲ್ಲಿದೆ.
ತಾಲೂಕಿನ ಕೆಲ ಪ್ರತಿಷ್ಠಿತ ಕುಟುಂಬಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಆರ್ಥಿಕ ಸಹಾಯ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಲಕ್ಷಾಂತರ ರೂ.ಗಳ ಅನುದಾನ ಅಗತ್ಯವಿದೆ. ಆರ್ಥಿಕ ಕೊರತೆಯ ನಡುವೆಯೂ ಕಾಮಗಾರಿ ಪ್ರಗತಿಯಲ್ಲಿದ್ದು, ಭಕ್ತಾದಿಗಳು ನಿರ್ಮಾಣ ಕಾರ‍್ಯಕ್ಕೆ ಸಹಕರಿಸಲು ಕೋಡೂರು ಕೆನರಾ ಬ್ಯಾಂಕ್ ಶಾಖೆಯ ಖಾತೆ ಸಂಖ್ಯೆ 1516101008701, IFSC Code : CNRB0001516 ಗೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಸುಧೀರ ಭಟ್, ಮುಂಬಾರು ತಿಮ್ಮಪ್ಪ, ಕೃಷ್ಣಯ್ಯಶೆಟ್ಟಿ ಮತ್ತಿತರರು ಇದ್ದರು.