HOSANAGARA ; ಮಲೆನಾಡಿನಲ್ಲಿ ವಾಸಿಸುತ್ತಿರುವ ಜನರ ಸಮಸ್ಯೆಯನ್ನು ಬಗೆಹರಿಸದೇ ಬೆಂಗಳೂರಿನ ಅರಣ್ಯ ಭವನದಲ್ಲಿ ಕುಳಿತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಸ್ಥಳೀಯವಾಗಿ ವಾಸಿಸುತ್ತಿರುವ ಜನರ ಮನೆ, ಸಾಗುವಳಿ ಭೂಮಿಯನ್ನು ಸೇರಿಸಿ ಅರಣ್ಯ ಎಂದು ದಾಖಲು ಮಾಡಿಕೊಂಡು 1916 ರಿಂದ ಮಾಡಿದ ನೋಟಿಫಿಕೇಶನ್‌ಗಳನ್ನು ಈಗ ಜಾರಿಗೆ ತರುತ್ತಿರುವುದನ್ನು ಮಾಡುತ್ತಿದ್ದು ರೈತರ ಸಾಗುವಳಿ ತೆರವು ಮಾಡಲು ಅರಣ್ಯ ಇಲಾಖೆ ಮುಂದಾದರೆ ಹುಷಾರ್ ಎಂದು ಮಲೆನಾಡ ಹೋರಾಟ ಸಮಿತಿ ಸಂಚಾಲಕ ತೀ.ನಾ. ಶ್ರೀನಿವಾಸ್ ಎಚ್ಚರಿಕೆ ನೀಡಿದರು.
ಹೊಸನಗರದಲ್ಲಿಂದು ಅರಣ್ಯ, ಸರ್ಕಾರಿ ಭೂಮಿ ಸಾಗುವಳಿ ತೆರವು ಕಾರ್ಯ ವಿರೋಧಿಸಿ ಜನಾಂದೋಲನ ಜಾಗೃತಿ ಪ್ರತಿಭಟನಾ ಸಭೆ ಪ್ರಜಾಪ್ರಭುತ್ವ ಜಾಗೃತಿ ವೇದಿಕೆಯ ಅಧ್ಯಕ್ಷ ಗಣೇಶ್ ಬೆಳ್ಳಿ ನೇತೃತ್ವದಲ್ಲಿ ತಾಲೂಕು ಕಛೇರಿ ಮುಂಭಾಗ ಹೊಸನಗರ ತಾಲ್ಲೂಕಿನ ರೈತರು, ವಿವಿಧ ಪಕ್ಷದ ಮುಖಂಡರು ಹೋರಾಟ ನಡೆಸಿದ್ದು ಈ ಸಂದರ್ಭದಲ್ಲಿ ರೈತರ ಪರ ನಿಂತು ಅವರು ಮಾತನಾಡಿದರು.
ಆಳುವ ಸರ್ಕಾರಗಳು ಜನವಿರೋಧಿ ನಿಲುವುಗಳನ್ನು ತೆಗೆದುಕೊಂಡಾಗ ಅದನ್ನು ವಿರೋಧಿಸುವುದು ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸುವುದು ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ಮಲೆನಾಡಿನಲ್ಲಿ ಸರ್ಕಾರಗಳೇ ಮಾಡಿದ ಅಣೆಕಟ್ಟಿನಿಂದ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ಮತ್ತು ಜನರ ಸಾಗುವಳಿ ಭೂಮಿ, ಮನೆಗಳು ಮುಳುಗುಡೆಯಾಗಿದ್ದು ಅದನ್ನು ಸರ್ಕಾರ ಗಮನಿಸಿ ಕ್ರಮ ಕೈಗೊಳ್ಳಬೇಕಾಗಿದೆ. ಕೆಲವರು ಪರಿಸರವಾದದ ಹೆಸರಿನಲ್ಲಿ ಪದೇಪದೇ ಕೋರ್ಟ್‌ಗೆ ಹೋಗುತ್ತಿರುವುದನ್ನು ಎದುರಿಸಲು ಮಲೆನಾಡಿನ ಜನರು ಸಂಘಟಿತರಾಗಬೇಕಾಗಿದೆ. 3 ಎಕರೆಗಿಂತ ಹೆಚ್ಚಿನ ಒತ್ತುವರಿಯನ್ನು ತೆರವು ಮಾಡುತ್ತೇವೆ ಎನ್ನುವ ಸರ್ಕಾರದ ನಿರ್ಧಾರ ರೈತರನ್ನು ಇಭ್ಬಾಗ ಮಾಡುವ ತಂತ್ರವಾಗಿದ್ದು, ಜನಸಂಗ್ರಾಮ ಪರಿಷತ್ 3 ಎಕರೆ ಒಳಗಿನ ರೈತರನ್ನು ತೆರವುಗೊಳಿಸಬೇಕೆಂದು ನ್ಯಾಯಾಲಯಕ್ಕೆ ಹೋಗಲು ಸಿದ್ಧವಾಗಿದೆ. ಇದನ್ನು ವಿರೋಧಿಸುತ್ತಾ ನಾವು ನಮ್ಮ ಬದುಕಿನ ಹಕ್ಕನ್ನು ನ್ಯಾಯಾಲಯದ ಮುಂದೆ ತೆಗೆದುಕೊಂಡು ಹೋಗಲು ಸಿದ್ಧರಾಗಬೇಕಾಗಿದೆ ಬೇಕಾಗಿದೆ ಎಂದರು.
ಉಗ್ರ ಹೋರಾಟಕ್ಕೆ ರೈತರೇ ಒಟ್ಟಾಗಿ ; ಗಣೇಶ್ ಬೆಳ್ಳಿ
ಹೋರಾಟ ಸಮಿತಿಯ ಅಧ್ಯಕ್ಷ ಗಣೇಶ್ ಬೆಳ್ಳಿ ಮಾತನಾಡಿ, ತಾಲ್ಲೂಕಿನ ಎಲ್ಲಾ ಅರಣ್ಯ ಹಕ್ಕು ಸಮಿತಿಯ, ಅಧ್ಯಕ್ಷರು ಕಾರ್ಯದರ್ಶಿಗಳು, ಸದಸ್ಯರುಗಳು ಪ್ರತೀ ಗ್ರಾಮದಲ್ಲಿದ್ದು ಸಮಿತಿಗಳಿಗೆ ಶಕ್ತಿ ತುಂಬಿ ಜನ ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ. ಸರ್ಕಾರದ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ನಡುವೆ ಮಾಹಿತಿ ವಿನಿಮಯವಿಲ್ಲದೇ ಆಗಿರುವ ತಪ್ಪುಗಳನ್ನು ಸರಿಪಡಿಸಿ ಗ್ರಾಮವಾರು ಪುನರ್ ಸರ್ವೆ ನಡೆಸಿ ರೈತರ ಸಾಗುವಳಿಗಳನ್ನು ಬಿಟ್ಟು ಅರಣ್ಯದ ಘೋಷಣೆಯಾಗಬೇಕಾಗಿದೆ.
ಮಲೆನಾಡಿನಲ್ಲಿ ಒತ್ತುವರಿ ಸಮಸ್ಯೆ ಉಂಟಾಗಲು ಇಲ್ಲಿನ ಅಣೆಕಟ್ಟುಗಳ ಮುಳುಗಡೆಯಾದ ರೈತರು ಕಳೆದುಕೊಂಡ ಭೂಮಿ ಮತ್ತು ಸರ್ಕಾರಗಳೇ ಕಾರಣವಾಗಿದೆ. ಅಣೆಕಟ್ಟುಗಳಲ್ಲಿ ಸಾವಿರಾರು ಹೆಕ್ಟೇರ್ ಅರಣ್ಯ ಮುಳುಗಡೆಯಾಗಿದ್ದು, ಅದನ್ನು ಪರಿಗಣಿಸದೇ ಮಲೆನಾಡಿನ ರೈತರ ಮೇಲೆ ತೂಗುಕತ್ತಿಯಾಗಿರುವ ಎಲ್ಲಾ ಕಾನೂನುಗಳಿಗೂ ತಿದ್ದುಪಡಿಗಳನ್ನು ಶಾಸನ ಸಭೆಯಲ್ಲಿ ತರಬೇಕೆಂದು ಒತ್ತಾಯಿಸಿ ಜನಾಂದೊಲನ ಜಾಗೃತಿ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ. ಇದಕ್ಕೆ ಸರ್ಕಾರಗಳು ಬಗ್ಗದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ಅನಿವಾರ್ಯವಾಗಿದ್ದು ರೈತರು ರೆಡಿಯಾಗಬೇಕೆಂದು ಕರೆ ನೀಡಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್, ದುಮ್ಮ ರೇವಣ್ಣಪ್ಪಗೌಡ, ಮಂಡಾನಿ ಮೋಹನ್, ಬಿ.ಜಿ.ನಾಗರಾಜ್, ಬಿ.ಪಿ ರಾಮಚಂದ್ರ, ಶ್ರೀಕರ ಸಂಪೆಕಟ್ಟೆ, ಬಾಷಿರ್ ಸಾಬ್, ಮಂಜುನಾಥ ಬ್ಯಾಣದ, ರೈತಸಂಘದ ಅಧ್ಯಕ್ಷ ರವೀಂದ್ರ ಮಾಸ್ತಿಕಟ್ಟೆ, ಶುಶ್ರುತ ಅಡಗೋಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ್, ಕುಮಾರ್ ಸೊನಲೆ, ಜೀವನ್ ಕುಮಾರ್, ನಾಗರಕೊಡಿಗೆ, ಶ್ರೀಕಾಂತ ಐತಾಳ್ ಹೊಸನಗರ ತಾಲ್ಲೂಕಿನ ನೂರಾರು ರೈತರು ಭಾಗವಹಿಸಿದ್ದರು.