ಅನಧಿಕೃತ ಕ್ಲಿನಿಕ್‌ಗಳ ಮೇಲೆ ಅಧಿಕಾರಿಗಳ ದಾಳಿ

0 781

ಚಿಕ್ಕಮಗಳೂರು: ಸೂಕ್ತ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸಲಾಗುತ್ತಿದ್ದ 4 ಕ್ಲಿನಿಕ್‌ಗಳ (Clinic) ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು (Health Department) ದಾಳಿ ನಡೆಸಿ ಅವುಗಳನ್ನು ಬಂದ್ ಮಾಡಿಸಿದ್ದಾರೆ.

ಉಪ್ಪಳ್ಳಿ ಉಪ್ಪಳ್ಳಿಯ ಮೆಡಿಕಲ್ ಮತ್ತು ಜನರಲ್ ಸ್ಟೋರ್‌ನಲ್ಲಿ ಅನಧಿಕೃತ ಕ್ಲಿನಿಕ್, ಮುಭಾರಕ್ ಕ್ಲಿನಿಕ್, ಮಲ್ಲಂದೂರು ರಸ್ತೆಯಲ್ಲಿರುವ ಎಸ್.ಎಂ ಕ್ಲಿನಿಕ್ ಮತ್ತು ಮಂಡಲ್ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿ ಪ್ರಯೋಗಾಲಯವನ್ನು ಬಾಗಿಲು ಮುಚ್ಚಿಸಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ ನೇತೃತ್ವದಲ್ಲಿ ಸಿಬ್ಬಂದಿಗಳು ಮಾಹಿತಿ ಮೇರೆಗೆ ನಗರದ ಮಲ್ಲಂದೂರು ರಸ್ತೆ ಮತ್ತು ಉಪ್ಪಳ್ಳಿ ಬಡಾವಣೆಯಲ್ಲಿ ಅನಧಿಕೃತವಾಗಿ ನಡೆಸಲಾಗುತ್ತಿದ್ದ ಕ್ಲಿನಿಕ್‌ಗಳ ಮೇಲೆ ದಾಳಿ ನಡೆಸಿದರು.

ಈ ವೇಳೆ ಮಾತನಾಡಿದ ಡಾ.ಶಶಿಕಲಾ ಕೆಪಿಎಂಇ ಆಕ್ಟ್ ಅಡಿಯಲ್ಲಿ ಪರವಾನಗಿ ಪಡೆಯದೆ ಮಲ್ಲಂದೂರು ರಸ್ತೆ ಮತ್ತು ಉಪ್ಪಳ್ಳಿಯಲ್ಲಿ ಕ್ಲಿನಿಕ್‌ಗಳನ್ನು ಆರಂಭಿಸಲಾಗಿದೆ. ಅವುಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿ ಕ್ಲಿನಿಕ್‌ಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದೇವೆ. ಸೂಕ್ತ ಪರವಾನಗಿ ಪಡೆಯದೆ ಮತ್ತೆ ಕ್ಲಿನಿಕ್‌ಗಳನ್ನು ಆರಂಭಿಸಿದಲ್ಲಿ ಪೊಲೀಸರನ್ನು ಕರೆ ತಂದು ಅವರಿಗೆ ಸೇರಿದ ಕ್ಲಿನಿಕ್ ಮತ್ತು ಮೆಡಿಕಲ್ ಸ್ಟೋರ್‌ಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದರು.

ಅನಧಿಕೃತವಾಗಿ ಕ್ಲಿನಿಕ್ ನಡೆಸುವುದು ಅಪರಾಧ. ಇದರ ಬಗ್ಗೆ ಜನರಿಗೆ ಮಾಹಿತಿ ಇದ್ದರೂ ಅನಧಿಕೃತವಾಗಿ ಕ್ಲಿನಿಕ್ ತೆರೆದು ನಂತರ ಕೆಪಿಎಂಇಗೆ ಪರವಾನಗಿಗೆ ಅರ್ಜಿ ಸಲ್ಲಿಸುವ ಕೆಲಸ ಆಗುತ್ತಿದೆ. ಸಾರ್ವಜನಿಕರಿಗೆ ನಾವು ಅನುಕೂಲ ಮಾಡುತ್ತಿದ್ದೇವೆ ಎಂದು ಅವರು ಭಾವಿಸಿರುತ್ತಾರೆ ಆದರೆ ಅದರಿಂದ ಜನತೆಗೆ ಹೆಚ್ಚು ನಷ್ಟವೇ ಆಗುತ್ತದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೀಮಾ ಮಾತನಾಡಿ, ಕೆಪಿಎಂಇ ಸರ್ಟಿಫಿಕೇಟ್‌ಗಳು ಇಲ್ಲದ ನಾಲ್ಕು ಕ್ಲಿನಿಕ್‌ಗಳನ್ನು ಮುಚ್ಚಲು ಸೂಚಿಸಿದ್ದೇವೆ. ನಾವು ಭೇಟಿ ನೀಡಿದ ಕ್ಲಿನಿಕ್‌ಗಳಲ್ಲಿ ಸ್ವಚ್ಛತೆಗೂ ಆಧ್ಯತೆ ಕೊಡದಿರುವುದು ಕಂಡು ಬಂದಿದೆ. ಮುಂದೆ ಅವರು ಪರವಾನಗಿ ಪಡೆದ ನಂತರ ಮತ್ತೆ ಭೇಟಿ ನೀಡಿ ಪರಿಶೀಲಿಸುತ್ತೇವೆ. ಅವರು ಸರಿಪಡಿಸಿಕೊಂಡಿಲ್ಲವಾದರೆ ಮತ್ತೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಕ್ಲಿನಿಕ್‌ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವೈದ್ಯಕೀಯ ತ್ಯಾಜ್ಯ ವನ್ನು ಬೇರ್‍ಪಡಿಸಿ ವಿಲೇವಾರಿ ಮಾಡಬೇಕು ಎನ್ನುವ ಇನ್ನಿತರೆ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ. ಬಾಲಕೃಷ್ಣ ಮತ್ತು ಸಿಬ್ಬಂದಿ ಇದ್ದರು.

Leave A Reply

Your email address will not be published.

error: Content is protected !!