ಕಾಯಕಲ್ಪದ ನಿರೀಕ್ಷೆಯಲ್ಲಿ ಶಿಥಿಲಾವಸ್ಥೆ ತಲುಪಿದ ವಸವೆ ಅಂಗನವಾಡಿ ಕಟ್ಟಡ

0 379

ಹೊಸನಗರ ; ಬಿರುಕುಬಿಟ್ಟ ಗೋಡೆಗಳು, ಈಗಲೋ ಆಗಲೋ ಧರಾಶಾಯಿ ಆಗಲಿರುವಂತ ಮೇಲ್ಛಾವಣಿ, ಒಡೆದು ಹಲವು ಚೂರುಗಳಾಗಿರುವ ಕಟ್ಟಡ ಮುಂಬಾಗಿಲು, ಮಕ್ಕಳು ಕುಳಿತಲ್ಲಿಯೇ ಸೀಳಿ ಹೋಗುತ್ತಿರುವ ನೆಲದ ಹಾಸು. ಈ ಎಲ್ಲಾ ದೃಶ್ಯಗಳನ್ನು ಒಟ್ಟಾಗಿ ನೀವು ನೋಡಲೇಬೇಕು ಎಂತಾದರೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ವಸವೆ ಗ್ರಾಮದ ಸರ್ಕಾರಿ ಅಂಗನವಾಡಿ ಕೇಂದ್ರದ ಕಟ್ಟಡಕ್ಕೆ ಭೇಟಿ ನೀಡಲೇಬೇಕು.

2010-11ನೇ ಸಾಲಿನ 12 ಮತ್ತು 13ನೇ ಹಣಕಾಸು ಸಾಲಿನಲ್ಲಿ ರೂ ಮೂರು ಲಕ್ಷ ಅನುದಾನದಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಾಣ ಆಗಿತ್ತು. ಈ ಭಾಗದ ಹಲವು ಗ್ರಾಮಗಳ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಅಂಗನವಾಡಿ ಕೇಂದ್ರಕ್ಕೆ ಮೊರೆ ಹೋಗಿದ್ದರು. ಕಳೆದ ಎರಡು ವರ್ಷಗಳ ಈಚೆಗೆ ಕಟ್ಟಡದಲ್ಲಿ ವ್ಯಾಪಕ ಬದಲಾವಣೆ ಕಂಡು ಬಂದು ರಿಪೇರಿ ಕಾರ್ಯಕ್ಕೆ ಮುಂದಾಗುವಂತೆ ಹಲವು ಬಾರಿ ಸಿಡಿಪಿಓ ಕಚೇರಿಗೆ ಗ್ರಾಮಸ್ಥರೇ ಮನವಿ ಸಲ್ಲಿಸಿದ್ದರು. ಆದರೂ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಗ್ರಾಮ ಪಂಚಾಯತಿ ಆಡಳಿತ ಸಹ ಕಟ್ಟಡ ದುರಸ್ತಿಗೆ ಸಂಬಂಧಪಟ್ಟಂತೆ ಇಲಾಖೆಗೆ ಪತ್ರ ಬರೆದು ಹಲವು ತಿಂಗಳೇ ಕಳೆದಿದೆ.

ಪ್ರಸಕ್ತ ಈ ಅಂಗನವಾಡಿಯು ಪಕ್ಕಲ ಸರ್ಕಾರಿ ಶಾಲೆಯ ನಲಿ-ಕಲಿ ಕೇಂದ್ರಕ್ಕೆ ವರ್ಗಾವಣೆಗೊಂಡಿದ್ದ ನಾಲ್ಕೈದು ಮಕ್ಕಳು ವ್ಯಾಸಂಗ ನಿರತರಾಗಿದ್ದಾರೆ. ಹಳೇ ಅಂಗನವಾಡಿ ಕಟ್ಟಡವು ಶಿಥಿಲಾವಸ್ಥೆ ತಲುಪಿರುವ ಕಾರಣ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಕುರಿತಂತೆ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಮಕ್ಕಳ ಶುಚಿತ್ವಕ್ಕೆ ಆಗತ್ಯವಾದ ಶೌಚಾಲಯ, ಕುಡಿಯುವ ನೀರು ಸೇರಿದಂತೆ ಸಂಪೂರ್ಣ ಕಟ್ಟಡ ದುರಸ್ತಿಗೆ ಇಲಾಖೆ ಮುಂದಾಗಬೇಕು. ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನ ಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒಕ್ಕೊರಳಿನ ದನಿಯಾಗಿದೆ.

Leave A Reply

Your email address will not be published.

error: Content is protected !!