ಚಿಂತೆ ಚಿಂತನಗೊಂಡಾಗ ಬದುಕು ಸಮೃದ್ಧ ; ರಂಭಾಪುರಿ ಶ್ರೀಗಳು

0 153

ಎನ್.ಆರ್.ಪುರ: ಮನುಷ್ಯನನ್ನು ಕಾಡುವ ಚಿಂತೆ ಹಲವಾರು. ಚಿತೆಯಿಂದ ನಿರ್ಜೀವ ವಸ್ತು ನಾಶಗೊಂಡರೆ ಚಿಂತೆಯಿಂದ ಸಜೀವ ವಸ್ತು ನಾಶಗೊಳ್ಳುತ್ತವೆ. ಚಿಂತೆ ಚಿಂತನೆಗೊಂಡಾಗ ಬದುಕು ಸಮೃದ್ಧಗೊಳ್ಳುವುದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಬುಧವಾರ ಸಂಜೆ ಜರುಗಿದ ಎನ್.ಆರ್.ಪುರ ತಾಲೂಕು ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಕಲಿ ಕಾಲದಲ್ಲಿ ನ್ಯಾಯ ಧರ್ಮ ನೀತಿಗಳ ಅರಿವು ಇಲ್ಲದಂತಾಗಿ ಬದುಕು ಕವಲು ದಾರಿಯಲ್ಲಿ ಸಾಗುತ್ತಿವೆ. ಸಮಷ್ಟಿ ಪ್ರಜ್ಞೆಯಲ್ಲಿ ಎಲ್ಲರ ಹಿತ ಅಡಗಿದೆ. ಅರಿವಿನ ಕಣ್ಣು ತೆರೆಸಲು ಧರ್ಮ ಮತ್ತು ಗುರು ಅವಶ್ಯಕ. ಮಲಿನಗೊಂಡ ಮನಸ್ಸು ಪರಿಶುದ್ಧಗೊಂಡು ಸತ್ಯ ನಿಷ್ಠೆ ಮತ್ತು ಧರ್ಮಾಸಕ್ತಿ ಬೆಳೆದು ಬರಬೇಕಾಗಿದೆ. ಇಂದಿನ ಎಳೆಯರೇ ಮುಂದಿನ ನಮ್ಮ ನಾಯಕರು. ಅವರನ್ನು ಸನ್ಮಾರ್ಗದಲ್ಲಿ ಕರೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಸತ್ಯ ಹರಿಶ್ಚಂದ್ರನ ಸತ್ಯ ನಿಷ್ಠೆ ಮತ್ತು ಶ್ರವಣಕುಮಾರನ ಮಾತಾ ಪಿತೃ ಘಟನೆಯಿಂದಾಗಿ ಮಹಾತ್ಮಾ ಗಾಂಧೀಜಿಯವರ ಜೀವನ ಸಂಪೂರ್ಣ ಬದಲಾವಣೆಯಾಗಿದ್ದನ್ನು ಕಾಣುತ್ತೇವೆ. ಬದುಕು ಬದಲಾಗಬೇಕಾದರೆ ಬದುಕುವ ದಾರಿಯೂ ಬದಲಾವಣೆಯಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಉಜ್ವಲ ಭವಿಷ್ಯಕ್ಕೆ ಬೋಧಿಸಿದ ದಶಧರ್ಮ ಸೂತ್ರಗಳು ಎಲ್ಲರ ಬಾಳಿಗೆ ಬೆಳಕು ತೋರಬಲ್ಲವು. ಬಾಳೆಗೊಂದು ಗೊನೆಯಿರುವಂತೆ ಬಾಳಿಗೊಂದು ನಿರ್ದಿಷ್ಟ ಗುರಿಯಿರಬೇಕೆಂದು ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಸಮಾರಂಭವನ್ನು ಉದ್ಘಾಟಿಸಿದ ಸುಳ್ಳದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ ಎಂದು ಸಾರಿದ ಶ್ರೀ ರಂಭಾಪುರಿ ಜಗದ್ಗುರುಗಳು ಸಾಹಿತ್ಯ ಪ್ರಿಯರು. ಕಳೆದ ವರ್ಷ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಅವಕಾಶ ನೀಡಿದ್ದರು. ಈ ವರ್ಷ ತಾಲೂಕಾ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ಸಂತೋಷದ ಸಂಗತಿ. ಶ್ರೀ ರಂಭಾಪುರಿ ಪೀಠ ಸರ್ವ ಸಮಾಜದ ಒಳಿತನ್ನು ಬಯಸುತ್ತ ಬಂದಿದೆ ಎಂದರು.

ಸಮ್ಮೇಳನದ ಸಹ ಅಧ್ಯಕ್ಷ ಕುಮಾರ ಮನೋಜ ಎಫ್.ಎ. ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಮಕ್ಕಳ ಸಾಹಿತ್ಯ ಸಮ್ಮೇಳನದ ಔಚಿತ್ಯವನ್ನು ವಿವರಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬೆಂಗಳೂರು ಅಧ್ಯಕ್ಷ ಸಿ.ಎನ್.ಅಶೋಕ, ಕಾರ್ಯಾಧ್ಯಕ್ಷ ಸಿ.ಮಹದೇವ, ರಾಜ್ಯ ಸಂಚಾಲಕ ಜಯರಾಮ್, ಚಿಕ್ಕಮಗಳೂರು ಕ.ರಾ.ಮ.ಸಾ.ಪ. ಅಧ್ಯಕ್ಷ ಮಲ್ಲಿಗೆ ಸುದೀರ್ ಮುಖ್ಯ ಅತಿಥಿಗಳಾಗಿದ್ದರು.

ಹಾಸ್ಯದಲ್ಲಿ ನೈತಿಕ ಪ್ರಜ್ಞೆ ಕುರಿತು ಚಿತ್ರದುರ್ಗದ ಟಿ. ಜಗನ್ನಾಥ ಮಾತನಾಡಿದರು. ಚಿಕ್ಕಮಗಳೂರಿನ ಬಿ.ನೀ. ವಿಶ್ವನಾಥ ಸರ್ವರನ್ನು ಸ್ವಾಗತಿಸಿದರು. ಚಿತ್ರದುರ್ಗದ ಗಂಜೀಗಟ್ಟಿ ಆರ್.ಕೃಷ್ಣಮೂರ್ತಿ ಭಕ್ತಿ ಗೀತೆ ಹಾಡಿದರು. ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.

Leave A Reply

Your email address will not be published.

error: Content is protected !!