ವಿಜೃಂಭಣೆಯಿಂದ ಸಂಪನ್ನಗೊಂಡ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ಮಹಾರಥೋತ್ಸವ

0 167

ಸೊರಬ : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವದ ಅವಭ್ರುಥೋತ್ಸವ ಓಕಳಿ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ದೇವಾಲಯದಿಂದ ಶ್ರೀ ರೇಣುಕಾಂಬ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆಯು ಓಕಳಿ ಕಟ್ಟೆಗೆ ತೆರಳಿ ಭಕ್ತರ ಸಮೂಹದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಕುಂಕುಮದ ನೀರು ಎರಚುವುದರ ಮೂಲಕ ಓಕಳಿ ಆಡಿದರು. ಭಕ್ತರು ಚಂದ್ರಗುತ್ಯಮ್ಮ ನಿನ್ನಾಲ್ಕು ಉದೋ.. ಉದೋ… ಎಲ್ಲಮ್ಮ ನಿನ್ನಾಲ್ಕು ಉದೋ… ಉದೋ… ಎಂಬ ಘೋಷಣೆಯೊಂದಿಗೆ ಭಕ್ತಿ ಸ್ಮರಣೆಯಲ್ಲಿ ಮಿಂದೆದ್ದರು.

ಜಾತ್ರಾ ಮಹೋತ್ಸವದ ಮೂರನೇ ದಿನದ ಅವಭ್ರುಥೋತ್ಸವ ಓಕಳಿಗೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ವಿ.ಎಲ್ ಶಿವಪ್ರಸಾದ್ ಚಾಲನೆ ನೀಡಿದರು.

ನಂತರ ಶ್ರೀ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಗ್ರಾಮದ ಮಂಗಳಾರತಿ ಕಟ್ಟೆ, ಹರೀಶಿ ರಸ್ತೆ, ಮುಖ್ಯ ರಸ್ತೆ ಮಾರ್ಗವಾಗಿ ಸುಂದರವಾಗಿ ಪುಷ್ಪಗಳಿಂದ ಅಲಂಕರಿಸಿದಂತಹ ನಾಲ್ಕು ಕಾಲು ಮಂಟಪದಲ್ಲಿ ಸಿಂಹಾಸನದ ಮೇಲೆ ಶ್ರೀ ದೇವಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಭಕ್ತರು ಹಣ್ಣು ಕಾಯಿ ಸೇವೆ ಸೇರಿದಂತೆ ವಿವಿಧ ರೀತಿಯ ಹರಕೆ ಸೇವೆಗಳನ್ನು ತೀರಿಸಿದರು.

ಬುಧವಾರ ದೇವಾಲಯದಲ್ಲಿ ತುಲಾಭಾರ ಸೇವೆ ಸೇರಿದಂತೆ ವಿವಿಧ ವಗೈರ ಹರಕೆ ಮತ್ತು ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿದ್ದು, ಭಕ್ತರಿಗೆ ಮೂಲಸೌಕರ್ಯಗಳನ್ನು‌ ಒದಗಿಸಲಾಗಿತ್ತು. ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿತ್ತು. ಶ್ರೀ ದೇವಿಯ ಜಾತ್ರಾ ಮಹೋತ್ಸವಕ್ಕೆ ತಾಲೂಕು ಆಡಳಿತ, ಸ್ಥಳೀಯ ಗ್ರಾಪಂ ಸೇರಿದಂತೆ ವಿವಿಧ ಸಂಘ ಸಂಸ್ಥೆಯವರು ಸಹಕಾರ ನೀಡಿದರು. ಪೊಲೀಸ್ ಇಲಾಖೆಯಿಂದ ಬಿಗಿ ಬದೋಬಸ್ತ್ ವ್ಯವಸ್ಥೆ ಕಲ್ಪಿಸಿ ಯಾವುದೇ ಅಹಿತಕರ ಘಟನೆಗೆ ಅಸ್ಪದ ನೀಡಲಿಲ್ಲ. ಜಾತ್ರಾ ಮಹೋತ್ಸವದ ಯಶಸ್ವಿಗೆ ಕಾರಣರಾಗಿ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
– ವಿ.ಎಲ್. ಶಿವಪ್ರಸಾದ್, ಕಾರ್ಯನಿರ್ವಹಣಾ ಅಧಿಕಾರಿ, ಶ್ರೀ ರೇಣುಕಾಂಬ ದೇವಸ್ಥಾನ

Leave A Reply

Your email address will not be published.

error: Content is protected !!