ಖಾಸಗಿಯಾಗಿ ನೀರು ಮಾರಾಟ ; ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ

0 179

ಚಿಕ್ಕಮಗಳೂರು : ಜಿಲ್ಲೆಯ ಕೆಲವು ಭಾಗಗಳಲ್ಲಿ ಸ್ವಂತಕ್ಕೆಂದು ಬೋರೆವೆಲ್ ಕೊರೆಸಿ ಟ್ಯಾಂಕರ್‌ಗಳ ಮೂಲಕ ನೀರನ್ನು ಖಾಸಗಿಯಾಗಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಬುಧವಾರ ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್‌ಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಕೆ.ಭರತ್ ಜಿಲ್ಲೆಯ ಬಹುತೇಕ ತಾಲ್ಲೂಕು ಬರಪೀಡಿತವಾಗಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಟ್ಯಾಂಕರ್ ಗಳಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ ಮನೋಸೋ ಇಚ್ಛೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಜಿಲ್ಲೆಯ ಗ್ರಾಮಾಂತರ, ಪಟ್ಟಣ ಹಾಗೂ ನಗರ ಭಾಗದಲ್ಲಿ ಕೆಲವು ಮಂದಿ ವೈಯಕ್ತಿಕ್ಕಾಗಿ ಬೋರೆವೆಲ್ ಕೊರೆಸಿಕೊಂಡು ಹಣ ಮಾಡುವ ದುರುದ್ದೇಶದಿಂದ ಮಾನವೀಯತೆ ಮರೆತು ಖಾಸಗಿಯಾಗಿ ನೀರನ್ನು ಮಾರಾಟ ಮಾಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದರು.

ನೀರಿನ ಅಭಾವದಿಂದ ತತ್ತರಿಸಿರುವ ಪ್ರದೇಶಗಳಿಗೆ ಜಿಲ್ಲಾಡಳಿತ ಖುದ್ದಾಗಿ ತೆರಳಿ ಕುಡಿಯುವ ನೀರನ್ನು ಸರಬರಾಜು ಮಾಡಬೇಕು. ಬರಗಾಲದಲ್ಲೂ ಅಕ್ರಮವಾಗಿ ನೀರಿನ ವ್ಯವಹಾರದಲ್ಲಿ ತೊಡಗಿರುವವರ ವಿರುದ್ಧ ಕಡಿವಾಣ ಹಾಕುವ ಮೂಲಕ ಬೋರೆವೆಲ್ ನೀರು ಸ್ವಂತಕ್ಕೆ ಹೊರತು, ಮಾರಾಟಕ್ಕಲ್ಲ ಎಂದು ಪರವಾನಗಿ ಕೊಡಬೇಕು ಎಂದು ಒತ್ತಾಯಿಸಿದರು.


ಜಿಲ್ಲೆಯು ಮಲೆನಾಡು, ಅರೆಮಲೆನಾಡು ಹಾಗೂ ಬಯಲುಸೀಮೆ ಒಳಗೊಂಡಿರುವ ಪ್ರದೇಶವಾಗಿದೆ. ಪ್ರಕೃತಿ ವಿಕೋಪದಿಂದ ಮಳೆ ಕ್ಷೀಣಿಸಿದೆ. ಅಲ್ಲದೇ ಕೆರೆಕಟ್ಟೆಗಳಲ್ಲಿ ನೀರಿಲ್ಲದೇ ಅಂತರ್ಜಲ ಕುಸಿತ ಕಂಡಿದೆ. ಮಳೆಯಿಲ್ಲದೇ ಅರಣ್ಯ ನಾಶವಾಗುತ್ತಿವೆ. ಕಾಡುಪ್ರಾಣಿಗಳು ಆಹಾರವಿಲ್ಲದೆ ನಾಡಿನತ್ತ ಧಾವಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ನಾಡಿನಲ್ಲಿ ಜನ ಜಾನುವಾರುಗಳಿಗೆ ನೀರಿನ ಅಭಾವ ತಲೆದೋರಿದೆ. ಹೀಗಾಗಿ ಸರ್ಕಾರ ಎಚ್ಚೆತ್ತುಕೊಂಡು ನೀರಿನ ಮೂಲಗಳನ್ನು ಅಭಿವೃಧ್ದಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಗಂಗಾಧರ್, ನಗರ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಹಾಜರಿದ್ದರು.

Leave A Reply

Your email address will not be published.

error: Content is protected !!