ಬಿಡಾಡಿ ಹಸುಗಳ ಕಡಿವಾಣಕ್ಕೆ ಠಾಣಾಧಿಕಾರಿಗೆ ಮನವಿ

0 283

ಮೂಡಿಗೆರೆ : ತಾಲ್ಲೂಕಿನ ಹಳೇ ಮೂಡಿಗೆರೆ ಸಮೀಪದ ಕಿತ್ತಲೆಗಂಡಿ ವೃತ್ತದಲ್ಲಿ ಬಿಡಾಡಿ ಹಸುಗಳು ಅಡ್ಡಾಡುತ್ತಿದ್ದು ಕೂಡಲೇ ಅವುಗಳನ್ನು ಗೋಶಾಲೆ ಅಥವಾ ಮಾಲೀಕರು ಕರೆದೊಯ್ಯುವ ಕೆಲಸವಾಗಬೇಕು ಎಂದು ದಲಿತಪರ ಸಂಘಟನೆಯ ಮುಖಂಡ ಸುಂದ್ರೇಶ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.


ಈ ಕುರಿತು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಿತ್ತಲೆಗಂಡಿ ವೃತ್ತದಲ್ಲಿ ಸುಮಾರು 30 ರಿಂದ 40 ಬಿಡಾಡಿ ಹಸುಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವ ಪರಿಣಾಮ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗಿರುವುದಲ್ಲದೇ ಈಚೆಗೆ ಓರ್ವ ಯುವಕ ಅಪಘಾತದಲ್ಲಿ ಸಾವಪ್ಪಿದ್ದಾನೆ ಎಂದು ತಿಳಿಸಿದ್ದಾರೆ.


ರಸ್ತೆಯುದ್ಧಕ್ಕೂ ಹಸುಗಳು ಸಂಚರಿಸುತ್ತಿರುವುದು ಅನೇಕ ಅಪಘಾತಗಳು ಜರುಗಿವೆ. ಜೊತೆಗೆ ಹಸುಗಳ ಕಳ್ಳತನ ಮಾಡುವುದು ಹೆಚ್ಚಾಗುವ ಹಿನ್ನೆಲೆಯಲ್ಲಿ ಇನ್ನಿತರೆ ಅಹಿತಕರ ಘಟನೆ ಸಂಭವಿಸುವ ಮೊದಲೇ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.


ಹಸುವಿನ ಮಾಲೀಕರು ಜವಾಬ್ದಾರಿಯುತ ನಡೆದುಕೊಳ್ಳುವ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ನಡೆದ ಎಸ್‌ಸಿ, ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಲಾಗಿದ್ದರೂ ಕೂಡಾ ಗ್ರಾ.ಪಂ. ಯಾವುದೇ ಕ್ರಮವಹಿಸಿರುವುದಿಲ್ಲ ಎಂದು ದೂರಿದ್ದಾರೆ.


ಹೀಗಾಗಿ ಹಸುಗಳ ಮಾಲೀಕರಿಗೆ ಸರಿಯಾಗಿ ಮಾರ್ಗದರ್ಶನ ನೀಡಬೇಕು ಅಥವಾ ಗೋಶಾಲೆಗೆ ರವಾನಿಸಲು ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅನಿಲ್, ರಾಕೇಶ್, ದೀಕ್ಷಿತ್ ಮತ್ತಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!