Chikkamagaluru | ಮಾರ್ಚ್ 09 ರಂದು ರಾಷ್ಟೀಯ ಲೋಕ ಅದಾಲತ್ ; ಶುಭಗೌಡರ್

0 151

ಚಿಕ್ಕಮಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮಾರ್ಚ್ 9 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶುಭಗೌಡರ್ ಹೇಳಿದರು.

ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಎಡಿಆರ್ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು, ಕಕ್ಷಿದಾರರು ಅದಾಲತ್‌ನ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ರಾಜಿಯಾಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣ ಪ್ರಕರಣಗಳು, ಕಾರ್ಮಿಕ ವಿವಾದಗಳು, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಗಣಿ ಮತ್ತು ಖನಿಜಗಳು, ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣಗಳು ಭೂ ಸ್ವಾಧೀನ ಸಿವಿಲ್ ಪ್ರಕರಣಗಳು, ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ಬಗೆಹರಿಸಲಾಗುವುದು. ಇದರಿಂದ ಕಕ್ಷಿದಾರರಿಗೆ ಸಮಯ, ಹಣದ ಉಳಿತಾಯದೊಂದಿಗೆ ನ್ಯಾಯವೂ ಶೀಘ್ರ ದೊರೆಯುತ್ತದೆ, ರಾಜಿ ಪ್ರಕರಣಗಳಲ್ಲಿ ಅಫೀಲಿಗೆ ಅವಕಾಶವಿರದು, ರಾಜಿಯಾದ ಪ್ರಕರಣಗಳಲ್ಲಿ ಕೋರ್ಟ್ ಶುಲ್ಕ ಹಿಂದಿರುಗಿಸಲಾಗುತ್ತದೆ, ತ್ವರಿತ ಪ್ರಕರಣ ಇತ್ಯರ್ಥದಿಂದ ಉಭಯ ಕಕ್ಷಿದಾರರಿಗೂ ನೆಮ್ಮದಿಯ ಜೀವನ ಸಾಧ್ಯವಾಗಲಿದೆ ಎಂದರು.

ಫೆಬ್ರವರಿ 1 ರವರೆಗೆ 34,064 ಪ್ರಕರಣಗಳು ಬಾಕಿ ಇದ್ದು ಇವುಗಳಲ್ಲಿ ಫೆಬ್ರವರಿ 23 ರವರೆಗೆ ರಾಜಿ ಸಂಧಾನಕ್ಕಾಗಿ 10,559 ಪ್ರಕರಣಗಳನ್ನು ಗುರುತಿಸಲಾಗಿದೆ, 3681 ಪ್ರಕರಣಗಳನ್ನು ರಾಜಿ ಸಂಧಾನಕ್ಕಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ದೂರವಾಣಿ ಸಂಖ್ಯೆ 08262-295321 ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಅಥವಾ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಟೋಲ್ ಫ್ರಿ ಸಂಖ್ಯೆ 1800-425-90900, 080-22111730 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್., ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಂದೀಶ್ ಆರ್.ಟಿ., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಎಂ. ಸುಧಾಕರ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!