ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವಕ್ಕೆ ತೆರೆ

0 169

ಎನ್.ಆರ್.ಪುರ: ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾ ಸಂಸ್ಥಾನ ಪೀಠದಲ್ಲಿ ಮಾರ್ಚ್ 20ರಿಂದ ನಡೆದುಕೊಂಡು ಬಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಎಲ್ಲಾ ಕಾರ್ಯಕ್ರಮಗಳು ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನಾ ಪೂಜೆಯೊಂದಿಗೆ ಜಯಂತಿ ಜಾತ್ರಾ ಮಹೋತ್ಸವ ಸಂಪನ್ನಗೊಂಡವು.

ಇದೇ ಸಂದರ್ಭದಲ್ಲಿ ಇಷ್ಟಲಿಂಗ ಮಹಾಪೂಜಾ ನೆರವೇರಿಸಿದ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ ಮನುಷ್ಯನ ಬುದ್ಧಿ ಶಕ್ತಿ ಬೆಳೆದಂತೆ ಭಾವನೆಗಳು ಬೆಳೆದುಕೊಂಡು ಬರಬೇಕಾಗಿದೆ. ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾಗಿದೆ. ಶಿಕ್ಷಣದಿಂದ ಬುದ್ಧಿ ಶಕ್ತಿ ಬೆಳೆದರೆ ಧರ್ಮಾಚರಣೆಯಿಂದ ಭಾವನೆಗಳು ಬೆಳೆಯಲು ಸಾಧ್ಯ. ಬದುಕಿ ಬಾಳುವ ಮನುಷ್ಯನಿಗೆ ಬುದ್ಧಿ ಭಾವನೆಗಳೆರಡೂ ಬೇಕು. ಜ್ಞಾನ ಕ್ರಿಯಾತ್ಮಕ ಬದುಕಿನೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ಲೋಕೋದ್ಧಾರ ಚಿಂತನೆಗಳನ್ನು ಅರಿತು ಬಾಳಿದರೆ ಜೀವನ ಸಾರ್ಥಕಗೊಳ್ಳುವುದು. ಒಂದು ವಾರ ಸಂದರ್ಭದಲ್ಲಿ ಅನ್ನ ದಾಸೋಹ ಪೂಜಾ ಕಾರ್ಯಗಳು ಮತ್ತು ಹೆಚ್ಚಿನ ಭಕ್ತರು ಪಾಲ್ಗೊಂಡು ಸಹಕರಿಸಿದ್ದು ತಮಗೆ ಅತೀವ ಸಂತೋಷವನ್ನು ಉಂಟು ಮಾಡಿದೆ ಎಂದರು.

ಈ ಅಪೂರ್ವ ಸುರಗಿ ಪೂಜಾರಾಧನಾ ಸಂದರ್ಭದಲ್ಲಿ ಎಡೆಯೂರು, ಮುಕ್ತಿಮಂದಿರ, ಸುಳ್ಳ, ಮಳಲಿಮಠ, ಕವಲೇದುರ್ಗ, ಮೈಸೂರು, ಸಂಗೊಳ್ಳಿ, ಸಿದ್ಧರಬೆಟ್ಟ, ಹಾರನಹಳ್ಳಿ ಶ್ರೀಗಳು ಮೊದಲ್ಗೊಂಡು ಸುಮಾರು 20ಕ್ಕೂ ಮಿಕ್ಕಿ ಮಠಾಧೀಶರು ಪಾಲ್ಗೊಂಡರು.

ಆಗಮಿಸಿದ ಸಹಸ್ರಾರು ಭಕ್ತರು ಭದ್ರಾ ನದಿಯಲ್ಲಿ ಮಂಗಳ ಸ್ನಾನ ಮಾಡಿ ಇಷ್ಟಲಿಂಗಾರ್ಚನೆ ಪೂಜಾ ನೆರವೇರಿಸಿದರು. ಒಂದೇ ಕಾಲದಲ್ಲಿ ಬಂದ ಎಲ್ಲಾ ಭಕ್ತರಿಗೂ ಅನ್ನದಾಸೋಹ ನೆರವೇರಿತು.

Leave A Reply

Your email address will not be published.

error: Content is protected !!