ಮೂಡಿಗೆರೆ: ನಾಮಿನಿ ಸದಸ್ಯರು ಎಂಎಲ್‍ಸಿ ಚುನಾವಣೆಯಲ್ಲಿ ಮತದಾನ ಮಾಡಬಹುದೇ ಅಥವಾ ಇಲ್ಲವೇ ಎಂಬ ಮೊಕದ್ದಮೆಗೆ ಘನ ನ್ಯಾಯಾಲಯ ತನ್ನ ತೀರ್ಪು ನೀಡಿದೆಯೇ ಹೊರತು ತನ್ನ ವಿಧಾನ ಪರಿಷತ್ ಸದಸ್ಯತ್ವದ ಬಗ್ಗೆ ತೀರ್ಪಿನಲ್ಲಿ ಯಾವುದೇ ಉಲ್ಲೇಖ ಮಾಡಿರುವುದಿಲ್ಲ. ವಿರೋಧ ಪಕ್ಷದ ಪುಕಾರಿಗೆ ಯಾರೂ ಆತಂಕಕ್ಕೊಳಪಡಬೇಕಾಗಿಲ್ಲ ಎಂದು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾಮಿನಿ ಸದಸ್ಯರು ಮತದಾನ ಮಾಡಬಾರದು ಎಂದು ನ್ಯಾಯಾಲಯದ ಏಕ ಸದಸ್ಯ ಪೀಠವು ದಾವೆ ವೊಂದರಲ್ಲಿ ತೀರ್ಪು ನೀಡಿದ್ದು, ಇದನ್ನು ಹೈಕೋರ್ಟ್‍ನ ದ್ವಿಸದಸ್ಯ ಪೀಠವು ಎತ್ತಿ ಹಿಡಿದಿದೆ. ಈ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಅವಕಾಶ ಕೂಡ ಇದೆ. ಮುಂದುವರೆದು ಚುನಾವಣಾ ಆಯೋಗ ಸಲ್ಲಿಸಿರುವ ತಕರಾರು, ಇನ್ನೂ ನ್ಯಾಯಾಲಯದ ಕಟಕಟೆಗೆ ಬಂದಿರುವುದಿಲ್ಲ. ಇದು ಜೂ. 9ರಂದು ನ್ಯಾಯಾಲಯದ ಕಲಾಪಕ್ಕೆ ಬರಲಿದ್ದು, ಅಲ್ಲಿ ವಾದ ವಿವಾದ ನಡೆದು ಅದರ ಆದೇಶ ಏನೆಂದು ಪರಿಶೀಲಿಸಬೇಕು. ಈ ಪ್ರಕರಣ ಇನ್ನೂ ಕೇವಲ ಕೋರ್ಟ್ ಸಮನ್ಸ್ ಹಂತದಲ್ಲಿದ್ದು, ಸ್ಪಷ್ಟ ತೀರ್ಪು ಬರಲು ಬಹಳಷ್ಟು ಸಮಯ ತಗುಲಲಿದೆ ಎಂದರು.