ಎತ್ತಿನಭುಜ ಚಾರಣಕ್ಕೆ ತಾತ್ಕಾಲಿಕ ನಿಷೇಧ

0 37

ಚಿಕ್ಕಮಗಳೂರು : ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಇಳಿಮುಖವಾದರೂ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಇನ್ನೂ ಮಳೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಬೆಟ್ಟಗುಡ್ಡಗಳು ಕುಸಿಯುವುದು, ಮರಗಳು ಮುರಿದು ಬೀಳುವುದು ಇನ್ನೂ ನಿಂತಿಲ್ಲ. ಹಾಗಾಗಿ, ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರ ಹಿತದೃಷ್ಠಿಯಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಎತ್ತಿನಭುಜ ಪ್ರವಾಸಿ ತಾಣದಲ್ಲಿ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಟ್ರೆಕ್ಕಿಂಗ್ ತೆರಳಲು ಉತ್ತಮ ತಾಣವಾಗಿರುವುದರಿಂದ ನಿತ್ಯ ನೂರಾರು ಜನ ಚಾರಣಕ್ಕೆ ಕೂಡ ಹೋಗುತ್ತಿದ್ದರು. ಆದರೆ, ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಬೆಟ್ಟ-ಗುಡ್ಡಗಳು ಕುಸಿಯುತ್ತಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಅದರ ಜೊತೆಗೆ ಕೆಲ ಹುಚ್ಚು ಪ್ರವಾಸಿಗರು ವಿಭಿನ್ನ ಭಂಗಿಯಲ್ಲಿ ಫೋಟೋ ತೆಗೆಯಲು ಹೋದಾಗ ಅಪಾಯಗಳು ಸಂಭವಿಸುವ ಸಾಧ್ಯತೆಯೂ ಇದೆ.

ಈ ಪ್ರದೇಶದಲ್ಲಿ ಒಂದು ವೇಳೆ ಅಪಾಯ ಸಂಭವಿಸಿದಾಗ ತುರ್ತಾಗಿ ಘಟನಾ ಸ್ಥಳಕ್ಕೆ ಹೋಗುವುದು ಕೂಡ ಕಷ್ಟ. ಹಾಗಾಗಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮುಂಜಾಗೃತ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯ ಉಂಟಾಗದಂತೆ ತಡೆಗಟ್ಟುವ ಹಿತದೃಷ್ಟಿಯಿಂದ ಎತ್ತಿನಭುಜಕ್ಕೆ ಚಾರಣ ಹೋಗುವುದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ.

Leave A Reply

Your email address will not be published.

error: Content is protected !!