ಗ್ರಾಮೀಣ ಕ್ರೀಡೆಗಳಿಗೆ ಸರ್ಕಾರ ಪ್ರೋತ್ಸಾಹಿಸುತ್ತಿದೆ – ಮಂಜುನಾಥ್

0 51


ಚಿಕ್ಕಮಗಳೂರು : ಪ್ರಸ್ತುತ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಸರ್ಕಾರ ಅವುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸಿ ಪುನಶ್ಚೇತನಗೊಳಿಸುತ್ತಿದೆ ಎಂದು ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಹೇಳಿದರು.


ತಾಲ್ಲೂಕಿನ ಬೆಟ್ಟದಮಳಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ವತಿಯಿಂದ ದೇವದಾನದ ಪ್ರೌಢಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ಕೊಡುವ ಸಲುವಾಗಿ ಖೋಖೋ, ಕಬಡ್ಡಿ ಸ್ಪರ್ಧೆಗಳನ್ನೊಳಗೊಂಡ ಕ್ರೀಡಾಕೂಟವನ್ನು ಆಯೋಜಿಸಲು ಮುಂದಾಗುತ್ತಿದೆ. ಇದರ ಸದುಪಯೋಗವನ್ನು ಗ್ರಾಮೀಣ ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಕ್ರೀಡಾಸಕ್ತಿ ಬೆಳೆಸಿಕೊಂಡು ರಾಜ್ಯಮಟ್ಟದಲ್ಲಿ ಹೆಸರು ಗಳಿಸಬೇಕು ಎಂದರು.


ತಾಲ್ಲೂಕು ದೈಹಿಕ ಶಿಕ್ಷಕ ಪರಮೇಶ್ವರ್ ಪ್ರಾಸ್ತಾವಿಕ ಮಾತನಾಡಿ ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ ವಾದ ಸಂಗತಿ. ಗೆಲುವು ಕಂಡವರು ಮುಂದಿನ ಹೆಜ್ಜೆಯತ್ತ ದಾಪುಗಾಲು ಇರಿಸಿದರೆ. ಸೋಲುಂಡವರು ಮರಳಿ ಪ್ರಯತ್ನದ ಕಡೆ ಹೆಚ್ಚು ಗಮನಹರಿಸಿದರೆ ಯಶಸ್ಸು ಲಭಿಸಲಿದೆ ಎಂದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಸಂಪತ್, ವಿಪತ್ತು ನಿರ್ವಹಣಾ ಘಟಕದ ಚಂದ್ರ ಶೇಖರ್, ಫ್ಲೌಡ್  ಫ್ಯಾಕ್ಟರಿ ಮಾಲೀಕರಾದ ಚಂದಿಲ್ ಕುಮಾರ್, ವೈಶ್ಯ ಹಾಸ್ಟೆಲ್ ಮಾಲೀಕ ರಮೇಶ್, ಕಾಫಿ ಬೆಳೆಗಾರ ನಾಗೇಶ್‌ಗೌಡ, ದೇವದಾನ ಪಿಡಿಓ ದೇವರಾಜ್, ಕೃಷ್ಣಚಾರ್ಯ, ಸಿ.ಆರ್.ಪಿ ಮಹೇಶ್, ಮಾನ್ವಿತಾ, ಪ್ರಕಾಶ್ ಹಾಗೂ ಮತ್ತಿತರರು ಇದ್ದರು.


ಶಾಲೆಯ ಶಿಕ್ಷಕರಾದ ಮಂಜುಳದೇವಿ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಅನುಸೂಯ ಸ್ವಾಗತಿಸಿದರು. ಪುಷ್ಪವತಿ ನಿರೂಪಿಸಿದರು. ವನಜಾಕ್ಷಿ ವಂದಿಸಿದರು.

ದಿವಿಜ 169 ಲಕ್ಷರೂ.ಲಾಭ : ಡಿ.ಎಚ್.ನಟರಾಜ್
ಚಿಕ್ಕಮಗಳೂರು : 169 ಲಕ್ಷರೂ.ಗಳ ನಿವ್ವಳ ಲಾಭ ಗಳಿಸಿರುವ ದಿವಿಜ ಪತ್ತಿನ ಸೌಹಾರ್ದ ಸಹಕಾರ ಸಂಘ ಶೇ.20 ಲಾಭಾಂಶವನ್ನು ನೀಡುತ್ತಿದೆ ಎಂದು ಅಧ್ಯಕ್ಷ ಡಿ.ಎಚ್.ನಟರಾಜ್ ತಿಳಿಸಿದರು.


ಕೆ.ಆರ್.ಪೇಟೆ ಬೂದನಿಕೆ ಸಮೀಪದ ಬಿರಿಂಜೆ ಆಕ್ವ ರೀಟ್ರೀಟ್‌ನಲ್ಲಿ 2022-23ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಅಧ್ಯಕ್ಷತೆವಹಿಸಿ ಭಾನುವಾರ ಅವರು ಮಾತನಾಡಿದರು. ಜಿಲ್ಲೆಯಲ್ಲೆ ಅತಿಹೆಚ್ಚು ವ್ಯವಹಾರ ನಡೆಸಿದ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಲಾಭಾಂಶದಲ್ಲಿ ಅಶಕ್ತ ಮಹಿಳೆಯರಿಗೆ ವಾರ್ಷಿಕ 2.5 ಲಕ್ಷರೂ.ನೆರವು ನೀಡುತ್ತಿದ್ದು ಷೇರುದಾರರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದರು.


ಚಿಕ್ಕಮಗಳೂರಿನ ಬಸವನಹಳ್ಳಿ ಮುಖ್ಯರಸ್ತೆ ಹೊಸದಿಗಂತ ಕಾಂಪ್ಲೆಕ್ಸ್ನಲ್ಲಿ ಸಹಕಾರಿ ಸಂಘ ಪ್ರಸ್ತುತ ಉತ್ತಮವಾಗಿ ಕರ‍್ಯನಿರ್ವಹಿಸುತ್ತಿದೆ. 10ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. 1,575ಲಕ್ಷ ರೂ.ಗಳ ದುಡಿಯುವ ಬಂಡವಾಳದೊಂದಿಗೆ 1,785 ಲಕ್ಷ ರೂ.ಗಳ ವಹಿವಾಟವನ್ನು ಮಾರ್ಚ್ 31ಕ್ಕೆ ನಡೆಸಿದೆ. 169 ಲಕ್ಷರೂ.ಗಳ ನಿವ್ವಳ ಲಾಭ ಗಳಿಸಿದೆ. ಪ್ರತಿ ಷೇರುದಾರರಿಗೆ ಶೇ.20ರಂತೆ ಲಾಭಾಂಶ ನೀಡುತ್ತಿರುವುದು ವಿಶೇಷ ಎಂದವರು ವಿವರಿಸಿದರು.


69ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯಿಂದ ದಿವಿಜ ಪತ್ತಿನ ಸೊಸೈಟಿಗೆ ಉತ್ತಮ ಸಹಕಾರಿ ಪ್ರಶಸ್ತಿ ದೊರೆತ್ತಿರುವುದು ಹೆಮ್ಮೆಯ ಸಂಗತಿ ಎಂದ ನಟರಾಜ್, ಷೇರುದಾರರಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಕಲ್ಪಿಸುವ ಆಲೋಚನೆ ಆಡಳಿತ ಮಂಡಳಿಯದಾಗಿದೆ ಎಂದರು.


ಉಪಾಧ್ಯಕ್ಷ ಟಿ.ಆರ್.ಹರೀಶ್, ನಿರ್ದೇಶಕರಾದ ಮಂಜುನಾಥಜೋಷಿ, ಎಸ್.ಶಂಕರನಾರಾಯಣಭಟ್ಟ, ಬಿ.ಆರ್.ಸಚ್ಚಿದಾನಂದ, ಎನ್.ಎಸ್.ನಾಗ್ರೆಂದ್ರ ಎಂ.ಎ.ನಾಗೇಂದ್ರ, ರಾಜಾರಾಮಕೋಟೆ, ಆರ್.ಜಿ.ಹಾಸ್ಯಗಾರ್, ಎನ್.ಕೆ.ಅಶ್ವಿನ್, ಕೆ.ಎನ್.ಮಂಜುನಾಥಭಟ್ಟ, ಸಿಇಓ ಸುಜಯ್‌ಕಶ್ಯಪ್ ವೇದಿಕೆಯಲ್ಲಿದ್ದರು.

Leave A Reply

Your email address will not be published.

error: Content is protected !!