ಸದ್ಯಕ್ಕೆ ನಳಿನ್ ಕುಮಾರ್ ಅವರನ್ನ ಅಧ್ಯಕ್ಷ ಸ್ಥಾನದಿಂದ ತೆಗೆಯುವ ಸಂದರ್ಭ ಕಾಣುತ್ತಿಲ್ಲ ; ಆರ್. ಅಶೋಕ್

0 45

ಚಿಕ್ಕಮಗಳೂರು : ಸದ್ಯ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲು ಇದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ಖಾಲಿ ಇಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಹೇಳಿದ್ದಾರೆ.


ಶನಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಇದೆ, ರಾಷ್ಟ್ರಾಧ್ಯಕ್ಷರ ತೀರ್ಮಾನ ಗೊತ್ತಿಲ್ಲ. ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ” ಎಂದು ಹೇಳಿದರು.

ನಮ್ಮದು ರಾಷ್ಟ್ರೀಯ ಪಕ್ಷ, ಅವರು ರಾಜೀನಾಮೆ ಕೊಟ್ಟರೂ, ದೆಹಲಿ ನಾಯಕರು ಅಂಗೀಕಾರ ಮಾಡಬೇಕಲ್ವಾ? ಲೋಕಸಭೆ ಚುನಾವಣೆ ಇದೆ, ಈಗ ಬದಲಾವಣೆ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸುತ್ತಾರೆ. ಅಲ್ಲಿವರೆಗೆ ರಾಜ್ಯಾಧ್ಯಕ್ಷರ ಪದವಿ ಖಾಲಿ ಇಲ್ಲ ಎಂದು ಅವರು ಹೇಳಿದರು.

ಇದೇ ವೇಳೆ ವಿಪಕ್ಷ ನಾಯಕನ ಆಯ್ಕೆಯ ಬಗ್ಗೆ ಮಾತನಾಡಿದ ಅಶೋಕ್, ಜುಲೈ 3ರಂದು ವಿಪಕ್ಷ ನಾಯಕನ ಬಗ್ಗೆ ಘೋಷಣೆ ಮಾಡುತ್ತಾರೆ. ಈಗಾಗಲೇ ವರಿಷ್ಠರು ಈ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು.

ಮಾತು ಮುಂದುವರಿಸಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಅಲ್ಲ, ಸಿಎಂ ರೀತಿ ಆಕ್ಟಿಂಗ್ ಮಾಡುತ್ತಿದ್ದಾರೆ. ಡಿಕೆಶಿ ಅವರದ್ದು ಒಂದು ರೀತಿ ಅತಿರೇಕದ ನಡೆ ಎಂದು ಮಾಜಿ ಸಚಿವ ಆರ್.ಅಶೋಕ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ನಂಗೆ ಸಿಎಂ ಸ್ಥಾನ ಸಿಗಲ್ಲ ಅನ್ನೋ ಗ್ಯಾರಂಟಿ ಇದೆ. ನಾನೇ ಸಿಎಂ ಎಂದು ಸಿದ್ದರಾಮಯ್ಯ ದೆಹಲಿಯಲ್ಲಿ ಹೇಳಿದ್ದಾರ. ಇದೇನು ಸಮ್ಮಿಶ್ರ ಸರ್ಕಾರವ ಎಂದು ಯಾರಿಗೆ ಹೇಳಿದ್ದಾರೆ, ಡಿಕೆಶಿಗೆ ಹೇಳಿದ್ದು, ಜಗಜ್ಜಾಹೀರು ಆಗಿದೆ. ಶಿವಕುಮಾರ್ ಈಗಿನಿಂದಲೇ ಓವರ್ಟೇಕ್ ಮಾಡಿ ಏನಾದರೂ ಕಿರಿಕಿರಿ ಮಾಡಲು ಹೊರಟಿದ್ದಾರೆ. ಕಿರಿಕಿರಿ ಬೀದಿಗೆ ಬಂದರೆ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.

ಮುಖ್ಯಮಂತ್ರಿ ಆದವರು ಹಿಂದಿನ ಸಿಎಂ ಅವರನ್ನು ಭೇಟಿ ಮಾಡೋದು ಮಾಮೂಲಿ, ನಾನು ಡಿಸಿಎಂ ಆಗಿದ್ದೆ, ನಿವೃತ್ತ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಅಶೋಕ್ ವ್ಯಂಗ್ಯವಾಡಿದರು.

ಇನ್ನು 3ನೇ ತಾರೀಖು ವಿಪಕ್ಷ ನಾಯಕನನ್ನು ಘೋಷಣೆ ಮಾಡುತ್ತಾರೆ. ನಾನು ಎರಡು ಕಡೆ ನಿಂತಿರುವುದು ಸರಿಯೋ ತಪ್ಪೋ ಗೊತ್ತಿಲ್ಲ. ಪಕ್ಷ ನಿಲ್ಲಲು ಹೇಳಿತ್ತು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಹಾಗಾಗಿ ನಿಂತೆ. ಕನಕಪುರದಲ್ಲಿ ಬಿಜೆಪಿಗೆ ಬೂತ್ ಏಜೆಂಟ್ ಕೂಡ ಇಲ್ಲ, ಕನಕಪುರದಲ್ಲಿ 75 ವರ್ಷದಲ್ಲಿ 5000 ಮತ ದಾಟಿಲ್ಲ, ನಾನು ಹೋರಾಟ ಮಾಡಿ 19,500 ಮತ ತೆಗೆದುಕೊಂಡಿದ್ದೇನೆ ಎಂದರು.

ಇನ್ನು ಈ ಸೋಲು ಬಿಜೆಪಿಗೆ ಸಾಂದರ್ಭಿಕ ಸೋಲು ಅಷ್ಟೇ, ಒಳಮೀಸಲಾತಿ, ಎಸ್ಟಿಗಳಿಗೆ 5% ಮೀಸಲಾತಿ ಜಾಸ್ತಿ ಮಾಡಿದ್ದು, ಯಾರಿಗೆ ಸೌಲಭ್ಯ ಸಿಕ್ಕಿದ್ಯೋ ಅವರು ನಮ್ಮ ಜೊತೆ ನಿಂತರೋ ಇಲ್ವೋ ಗೊತ್ತಿಲ್ಲ, ಯಾರಿಗೆ ಸೌಲಭ್ಯ ಸಿಕ್ಕಿಲ್ಲ ಅವರು ನಮ್ಮ ವಿರುದ್ಧ ಇರೋದು ಕಾಣುತ್ತಿದೆ. ಮೀಸಲಾತಿ ಹೊಡೆತ ಬಿದ್ದಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲಿ ಇದನ್ನೆಲ್ಲಾ ಚರ್ಚೆ ಮಾಡುತ್ತೇವೆ ಎಂದರು.

Leave A Reply

Your email address will not be published.

error: Content is protected !!