ಮಾ. 03 ರಿಂದ 7 ರ ವರೆಗೆ ರಂಭಾಪುರಿ ಮಹಾ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ

ಎನ್.ಆರ್ ಪುರ: 2023 ಮಾರ್ಚ 3ರಿಂದ 7ರ ವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ದಿನಾಂಕ 4ರಂದು ಸಂಜೆ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ ಹಾಗೂ ಜಾನಪದ ಹಬ್ಬವನ್ನು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸುವರು. ಶಾಸಕರಾದ ಈಶ್ವರ ಖಂಡ್ರೆ, ಬೆಳ್ಳಿ ಪ್ರಕಾಶ ಮತ್ತು ಡಿ.ಎಸ್.ಸುರೇಶ ಮುಖ್ಯ ಅತಿಥಿಗಳಾಗಿರುವರು.

ವಿಧಾನ ಪರಿಷತ್ ಸಭಾಪತಿ ಎಮ್.ಕೆ.ಪ್ರಾಣೇಶ್ ಶ್ರೀ ಪೀಠದ ದಾಖಲೆ ಸಂಪುಟ-2ನ್ನು ಬಿಡುಗಡೆಗೊಳಿಸುವರು. ಜಾನಪದ ಹಬ್ಬದಲ್ಲಿ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಜಾನಪದ ಬಾಲಾಜಿ, ಜಿಲ್ಲಾಧ್ಯಕ್ಷ ಎಸ್.ಹೆಚ್.ಪೂರ್ಣೇಶ್, ಬಾಳೆಹೊನ್ನೂರು ಹೋಬಳಿ ಅಧ್ಯಕ್ಷ ಸುನೀಲರಾಜ್ ಭಂಡಾರಿ ಪಾಲ್ಗೊಳ್ಳುವರು.

ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಯುವರು.


ದಿನಾಂಕ 5ರ ಬೆಳಿಗ್ಗೆ ಜರುಗುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಹಾಗೂ ಶಿವಾದ್ವೈತ ಧರ್ಮ ಸಮ್ಮೇಳನವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಕೇಂದ್ರದ ರೈತ ಕಲ್ಯಾಣ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ.ವೈ.ರಾಘವೇಂದ್ರ, ಸಚಿವರಾದ ಸಿ.ಸಿ.ಪಾಟೀಲ, ವಿ.ಸುನೀಲ್ ಕುಮಾರ್, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಸಿ.ಟಿ.ರವಿ, ಟಿ.ಡಿ.ರಾಜೇಗೌಡರು, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಡಾ.ಬೇಳೂರು ರಾಘವೇಂದ್ರ ಶೆಟ್ಟಿ, ಬಸಯ್ಯ ಕಾಡಯ್ಯ ಹಿರೇಮಠ, ಡಾ||ಕೃಷ್ಣಾರೆಡ್ಡಿ, ಸಿ.ಮೃತ್ಯುಂಜಯಸ್ವಾಮಿ, ಮಲ್ಲಿಕಾರ್ಜುನ ಬಿ.ಗುಂಗೆ, ಸೋಮನಾಥ ಗೋರಟಾ, ಎಮ್.ಎಸ್.ದಿವಾಕರ ಭಾಗವಹಿಸುವರು.


ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ:

2023ರ ಶ್ರೀ ಪೀಠದ ಅತ್ಯುನ್ನತ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿಯನ್ನು ಮಾಜಿ ಮುಖ್ಯ ಮಂತ್ರಿ-ಕೇಂದ್ರೀಯ ಚುನಾವಣಾ ಸಮಿತಿ ಸದಸ್ಯ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರದಾನ ಮಾಡಲಾಗುವುದು. ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಸಂಸದೀಯ ವ್ಯವಹಾರ ಮತ್ತು ಕಲ್ಲಿದ್ದಲು ಇಲಾಖೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಬಿಡುಗಡೆ ಮಾಡುವರು. ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಮುಕ್ತಿಮಂದಿರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಯುವರು. ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡುವರು. ಇದಕ್ಕೂ ಮುನ್ನ ಶ್ರೀ ಪೀಠದಲ್ಲಿ ನಿರ್ಮಾಣಗೊಳ್ಳಲಿರುವ 51ಅಡಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿ ಕಾರ್ಯಾರಂಭದ ಶಿಲಾನ್ಯಾಸವನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು, ಮೂಲ ಪೀಠದ ನವೀಕರಣದ ಶಿಲಾನ್ಯಾಸವನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರವೇರಿಸಲಿದ್ದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಶ್ರೀ ಪೀಠದ ಮುಂಭಾಗದ ನೂತನ ರಸ್ತೆ ಉದ್ಘಾಟನೆ ಮಾಡುವರು.


ದಿನಾಂಕ 6ರ ಸಂಜೆ ನೇಗಿಲ ಯೋಗಿಯ ನೆನಹು ಕಾರ್ಯಕ್ರಮವನ್ನು ಮಾಜಿ ಉಪಮುಖ್ಯ ಮಂತ್ರಿ ಶಾಸಕ ಕೆ.ಎಸ್.ಈಶ್ವರಪ್ಪ ಉದ್ಘಾಟಿಸುವರು. ಡಾ.ಗುರುದೇವ ಶಿವಾಚಾರ್ಯ ಜೀವನ ದರ್ಶನ ಕೃತಿಯನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಲೋಕಾರ್ಪಣೆ ಮಾಡುವರು. ಜಂಗಮ ವಾಹಿನಿ ನೂತನ ಪತ್ರಿಕೆಯನ್ನು ಅ.ಭಾ.ವೀ.ಮಹಾಸಭೆ ಜಿಲ್ಲಾಧ್ಯಕ್ಷ ಹೆಚ್.ಎಮ್.ಲೋಕೇಶ್ ಬಿಡುಗಡೆಗೊಳಿಸುವರು.

ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯ ಎಸ್.ಎಲ್. ಭೋಜೇಗೌಡರು, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ವಿ.ಪ. ಸದಸ್ಯೆ ಗಾಯತ್ರಿ ಶಾಂತೇಗೌಡರು, ಬಿಲ್ರ‍್ಸ್ ವೀರೇಶ ಪಾಟೀಲ, ಶ್ರೀನಿವಾಸ ರೆಡ್ಡಿ ಭಾಗವಹಿಸುವರು. ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು ನೇತೃತ್ವ ವಹಿಸಲಿದ್ದು ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ನುಡಿಯುವರು. ಮಾನ್ವಿಯ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು ಹಾಗೂ ನರಗುಂದದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಉಪದೇಶಾಮೃತ ನೀಡುವರು.


ದಿನಾಂಕ 3ರಂದು ಬೆಳಿಗ್ಗೆ ಧ್ವಜಾರೋಹಣ ಹರಿದ್ರಾಲೇಪನ ನಡೆದ ನಂತರ ಶ್ರೀ ವೀರಭದ್ರಸ್ವಾಮಿ ವಿಜಯೋತ್ಸವ-ಗುಗ್ಗುಳ ಮಹೋತ್ಸವ ಹೂಲಿಯ ಶಿವಸಿದ್ಧರಾಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಬಸವರಾಜ ನ್ಯಾಮತಿ ಇವರ ಉಸ್ತುವಾರಿಯಲ್ಲಿ ಜರುಗುವುದು. ದಿನಾಂಕ 4ರ ಬೆಳಿಗ್ಗೆ ದೀಪೋತ್ಸವ-ಕುಂಕುಮೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ಚಿಕ್ಕ ರಥೋತ್ಸವ ಜರುಗಲಿದ್ದು ಸಂಜೆ 5 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಶ್ರೀ ಪೀಠದ ವರೆಗೆ ಸಕಲ ಬಿರುದಾವಳಿ ವಾದ್ಯ ವೈಭವಗಳೊಂದಿಗೆ ನಡೆಯುವುದು.

ದಿನಾಂಕ 5ರ ಬೆಳಿಗ್ಗೆ ಶಿವದೀಕ್ಷಾ-ಅಯ್ಯಾಚಾರ ನೆರವೇರಲಿದ್ದು ಅಪೇಕ್ಷಿತರು ಎರಡು ದಿನ ಮೊದಲು ತಮ್ಮ ಹೆಸರನ್ನು ಶ್ರೀ ಪೀಠದ ಕಾರ್ಯಾಲಯದಲ್ಲಿ ನೋಂದಾಯಿಸಬೇಕು. ಅಂದು ರಾತ್ರಿ 8-30ಗಂಟೆಗೆ ಗಾನಗಂಧರ್ವ ಗುರುಸ್ವಾಮಿ ಕಲಕೇರಿ ಗದಗ ಸಂಗಡಿಗರಿಂದ ಭಕ್ತಿ ಗೀತೆಗಳ ಗಾನ ತರಂಗ ಏರ್ಪಡಿಸಲಾಗಿದೆ.

ದಿನಾಂಕ 6ರಂದು ಶಯನೋತ್ಸವ, ಶ್ರೀ ಜಗದ್ಗುರು ಶಿವಾನಂದ ಎಸ್ಟೇಟಿನಲ್ಲಿ ಪೂಜಾ ಪ್ರಸಾದ ವಿನಿಯೋಗ ಸಂಜೆ ಬಸವನಕೋವಿಯಲ್ಲಿ ಕೆಂಡಾರ್ಚನೆ ಜರುಗುವುದು.

ದಿನಾಂಕ 7ರಂದು ವಸಂತೋತ್ಸವ ಮತ್ತು ಭದ್ರಾ ನದಿ ತೀರದಲ್ಲಿ ಸುರಗಿ ಸಮಾರಾಧನೆ ನಡೆಯುವುದು. ಆಗಮಿಸುವ ಭಕ್ತಾದಿಗಳಿಗೆ ಬೆಳಗಿನ ಫಲಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!