ಹೊಸನಗರ: ಧೀರ ದೀವರ ಸಂಘ (ರಿ.), ಬೆಟ್ಟಮಲ್ಲಪ್ಪ ವತಿಯಿಂದ ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಧೀರ ದೀವರ ಸುಗ್ಗಿ ಹಬ್ಬವನ್ನು ಮೇ 24ರಂದು ಬೆಳಿಗ್ಗೆ 8.30ರಿಂದ ಮಾರುತಿಪುರ ಗ್ರಾಮ ಪಂಚಾಯತ್ ವಿಜಾಪುರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಮಹೇಶ್ ಕಾಪಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೀವರ ಸಮುದಾಯದ ಸಂಸ್ಕೃತಿ, ಪರಂಪರೆ, ಜನಪದ ಕಲೆ, ಜೀವನ ಪದ್ಧತಿ ಹಾಗೂ ಗ್ರಾಮೀಣ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ, ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಆಶಯದೊಂದಿಗೆ ಸಮಾಜದ ಎಲ್ಲರನ್ನು ಒಗ್ಗೂಡಿಸುವುದು ನಮ್ಮ ಉದ್ದೇಶ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ನಿಟ್ಟೂರು ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತ ಶ್ರೀಗಳು, ಕಲಬುರಗಿಯ ಚಿತ್ತಾಪುರ ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ॥ ರಾಮಪ್ಪನವರು ವಹಿಸಲಿದ್ದಾರೆ.
ಲೇಖನವನ್ನು ಮುಂದುವರಿಸಿ ಓದಿ
ಕಾರ್ಯಕ್ರಮದ ಉದ್ಘಾಟನೆಯನ್ನು ಪೂಜ್ಯ ಸ್ವಾಮೀಜಿಗಳವರ ಅಮೃತ ಹಸ್ತದಿಂದ ನೆರವೇರಿಸಲಾಗುವುದು. ಅಧ್ಯಕ್ಷತೆಯನ್ನು ನಿಕಟಪೂರ್ವ ಅಧ್ಯಕ್ಷ ಗಣಪತಿ ಮಾಕನಕಟ್ಟೆ ಅವರು ವಹಿಸಲಿದ್ದಾರೆ ಎಂದು ಮಹೇಶ್ ಕಾಪಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಈಶ್ವರಪ್ಪ ಬಿ.ಎನ್, ಪ್ರಗತಿಪರ ರೈತ ಚೂಡಪ್ಪ, ನಿವೃತ್ತ ಸೈನಿಕ ಗಿರೀಶ್ ಗೋರಗದ್ದೆ, ಭರತನಾಟ್ಯ ಕಲಾವಿದೆ ಕು. ಮಾನ್ವಿತಾ ಹಿಲಗೋಡು ಅವರುಗಳನ್ನು ಗೌರವಿಸಲ್ಪಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಮಧು ಗಣಪತಿರಾವ್, ಖ್ಯಾತ ವಕೀಲ ಹಿರಯಪ್ಪ ಡಿ.ಎಚ್., ಕುಮಾರಸ್ವಾಮಿ, ಇಂದಿರಾ ಗಾಂಧಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ. ಶೈಲಜಾ ಕೆ. ಅರಗೋಡಿ, ನಿವೃತ್ತ ಪ್ರಾಧ್ಯಾಪಕ ಗೋಪಾಲ ಕಾಪಿ, ಸಮಾಜದ ಹಿರಿಯರಾದ ಪುಟ್ಟಪ್ಪ ಕತ್ರಿಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ.
ಧೀರ ದೀವರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗಾಗಿ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಜನಪದ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದೀವರ ಸಮಾಜದ ಪರಂಪರೆಯನ್ನು ಬಿಂಬಿಸುವ ಕಾರ್ಯಕ್ರಮಗಳು ಜನರ ಗಮನ ಸೆಳೆಯಲಿವೆ.
ಪುರುಷರಿಗಾಗಿ ಅಂಟಿಕೆ-ಪಿಂಟಿಕೆ, ಕೋಲಾಟ, ಡೊಳ್ಳು ಕುಣಿತ, ಚಂಡೆ ವಾದ್ಯ ಸೇರಿದಂತೆ ವಿವಿಧ ಜನಪದ ಕಾರ್ಯಕ್ರಮಗಳು ನಡೆಯಲಿವೆ. ಮಹಿಳೆಯರಿಗಾಗಿ ಸೋಬಾನೆ ಪದ, ಹಸೆ ಚಿತ್ತಾರ, ಭೂಮಿ ಹುಣ್ಣಿಮೆ ಕುಕ್ಕೆ ಪ್ರದರ್ಶನ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಮುದಾಯದ ಎಲ್ಲ ಬಾಂಧವರು, ಗ್ರಾಮಸ್ಥರು, ಯುವಕರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಧೀರ ದೀವರ ಸಂಘದ ಅಧ್ಯಕ್ಷ ಮಹೇಶ್ ಕಾಪಿ ಮನವಿ ಮಾಡಿದ್ದಾರೆ.

