ಮೂಡಿಗೆರೆ: ಕೊಟ್ಟಿಗೆಹಾರ – ಬಾಳೆಹೊನ್ನೂರು ಮಾರ್ಗದ ಚೆನ್ನಡ್ಲು ಸಮೀಪ ರಾಜ್ಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿದ್ದು ಅದೃಷ್ಟವಶಾತ್ ಚಾಲಕ, ನಿರ್ವಾಹಕ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹಿಂದೆ ಮುಂದೆ ಯಾವುದೇ ವಾಹನಗಳು, ಪಾದಚಾರಿಗಳು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಸದ್ಯ ಧರ್ಮಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪಾದಯಾತ್ರೆಗಳು ರಸ್ತೆ ಮೂಲಕ ಯಾತ್ರೆ ಹಮ್ಮಿಕೊಂಡಿದ್ದಾರೆ. ಒಂದು ವೇಳೆ ಅಪಘಾತದ ಸ್ಥಳದಲ್ಲಿ ಯಾರಾದರೂ ಪಾದಯಾತ್ರಿಗಳು ಚಲಿಸುತ್ತಿದ್ದರೆ, ಆಗೋ ಅನಾಹುತವನ್ನು ಕಲ್ಪನೆ ಮಾಡಿಕೊಳ್ಳೊದು ಕೂಡ ಅಸಾಧ್ಯ.
ಇತ್ತೀಚಿಗೆ ಟಿಪ್ಪರ್ ವಾಹನ ಚಾಲಕರು ಎರ್ರಾಬಿರ್ರಿ ವಾಹನ ಚಾಲನೆ ಮಾಡುತ್ತಾ ಜನಸಾಮಾನ್ಯರಿಗೆ ವಿಲನ್ ಗಳಾಗಿ ಪರಿಣಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟಿಪ್ಪರ್ ವಾಹನಕ್ಕೆ ಮಾತ್ರವಲ್ಲ ಟಿಪ್ಪರ್ ವಾಹನ ಚಾಲಕರಿಗೂ ಬ್ರೇಕ್ ಹಾಕಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.