ಆರ್.ಎಂ.ಎಂ. ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಬಲಿಪಶು ; ವಾಟಗೋಡು ಸುರೇಶ ಗಂಭೀರ ಆರೋಪ

0 289


ಹೊಸನಗರ: ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ರಾಜಕೀಯ ಹಿತಾಸಕ್ತಿಗೋಸ್ಕರ ಸಹಕಾರಿ ಕ್ಷೇತ್ರದ ಧುರೀಣ ಆರ್.ಎಂ.ಮಂಜುನಾಥಗೌಡರರನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ್ ಆಪಾದಿಸಿದ್ದಾರೆ.


ಅವರು ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಬ್ಯಾಂಕ್‌ನ ಶಾಖೆಯೊಂದರಲ್ಲಿ ನಡೆದ ಹಣಕಾಸು ಅವ್ಯವಹಾರ ಪ್ರಕರಣ ನಡೆದು ಎಷ್ಟೋ ವರ್ಷಗಳೇ ಕಳೆದಿವೆ. ಆದರೆ ತನಿಖೆ ಮಾತ್ರ ಪದೇ ಪದೇ ನಡೆಯುತ್ತಲೇ ಇದೆ. ಪ್ರತಿ ಬಾರಿಯೂ ಮಂಜುನಾಥಗೌಡರು ನಿರಾಪರಾಧಿ ಎಂದು ಸಾಬೀತಾಗುತ್ತಿದೆ. ಆದರೆ ರಾಜಕೀಯ ದಾಳದಲ್ಲಿ ಅವರನ್ನು ಪದೇ ಪದೇ ಬಳಸಿಕೊಳ್ಳಲಾಗುತ್ತಿದ್ದು, ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.


ಈಗ ಮತ್ತೆ ಇ.ಡಿ. ಸಂಸ್ಥೆ ದಾಳಿ ನಡೆಸಿದೆ. ಇದರ ಹಿಂದೆ ಬಿಜೆಪಿಯವರ ಕೈವಾಡವಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಜುನಾಥಗೌಡರು ಸ್ಪರ್ಧಿಸಬಹುದೆನ್ನುವ ಭಯದಿಂದ ಈ ದಾಳಿ ನಡೆದಿದೆ. ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಕಳೆದ ಒಂದು ದಶಕದಿಂದಲೂ ಮಂಜುನಾಥಗೌಡರ ವಿರುದ್ದ ಅವರ ರಾಜಕೀಯ ವಿರೋಧಿಗಳು ಷಡ್ಯಂತ್ರ ನಡೆಸುತ್ತಲೇ ಬಂದಿದ್ದಾರೆ. ಹಾಗಾದರೆ ಈ ಪ್ರಕರಣದ ಅಂತ್ಯ ಯಾವಾಗ, ಒಂದು ಪ್ರಕರಣಕ್ಕೆ ಎಷ್ಟು ಬಾರಿ ತನಿಖೆ ನಡೆಯುತ್ತದೆ ಎನ್ನುವುದು ಸ್ಪಷ್ಟವಾಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಮಂಜುನಾಥಗೌಡರು ಪಕ್ಷಾತೀತವಾಗಿ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರಕ್ಕೆ ಹೊಸ ರೂಪ ನೀಡಿದವರು. ಅವರ ಜನಪ್ರಿಯತೆ ಸಹಿಸದ ಅವರ ವಿರೋಧಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ತನಿಖಾ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದರು.


ಪ್ರಸ್ತುತ ಪ್ರಕರಣದಲ್ಲಿ ಮಂಜುನಾಥಗೌಡರನ್ನು ಸಿಲುಕಿಸುವ ಯತ್ನಕ್ಕೆ ಹಿನ್ನೆಡೆಯಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿರುವುದು ಸ್ವಾಗತಾರ್ಹ. ಆದರೆ ಪ್ರತಿ ಬಾರಿಯೂ ನ್ಯಾಯಾಲಯಕ್ಕೇ ಹೋಗಬೇಕಾದ ಅನಿವರ‍್ಯತೆ ಎದುರಾಗಿರುವುದು ವಿಪರ‍್ಯಾಸ. ರಾಜ್ಯ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು.


ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿದೆ. ರೈತರಿಗೆ ಬೆಳೆ ವಿಫಲವಾಗಿದೆ. ಕುಡಿಯುವ ನೀರಿನ ಕೊರತೆ ಕಂಡುಬರತೊಡಗಿದೆ. ಜಾನುವಾರುಗಳಿಗೆ ಮೇವಿಲ್ಲ. ಬಡಪೀಡಿತ ಪ್ರದೇಶಗಳ ಸಮೀಕ್ಷೆ ಆಗಬೇಕಿದೆ. ವಿಶೇಷ ಅನುದಾನ ಬಿಡುಗಡೆಯಾಗಬೇಕಿದೆ. ರೈತರಿಗೆ ಮನಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ. ಆದರೆ ಸಂಸದರು ಅದೆಲ್ಲವನ್ನೂ ಮರೆತಿದ್ದಾರೆ. ಮುಂದಿನ ಚುನಾವಣೇಗೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.


ಗೋಷ್ಠಿಯಲ್ಲಿ ಸಹಕಾರಿ ಧುರೀಣರಾದ ಹಾಲಗದ್ದೆ ಉಮೇಶ್, ಲೀಲಕೃಷ್ಣ, ಪ್ರವೀಣ್, ಶ್ರೀನಿವಾಸ ರೆಡ್ಡಿ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!