ಕೊಡಚಾದ್ರಿ ಗಿರಿ ನಿರ್ಬಂಧ ತೆರವಿಗಾಗಿ ಪ್ರತಿಭಟನೆ

0 44

ಹೊಸನಗರ : ಕೊಡಚಾದ್ರಿ ಗಿರಿಯು ನೂರಾರು ವರ್ಷಗಳಿಂದ ಭಕ್ತರ ಆರಾಧ್ಯ ಕೇಂದ್ರವಾಗಿದೆ. ವನ್ಯಜೀವಿ ಇಲಾಖೆ ಕೊಡಚಾದ್ರಿ ಪ್ರವೇಶವನ್ನು ನಿರ್ಬಂಧಿಸಿರುವುದರಿಂದ ಭಕ್ತರ ಧಾರ್ಮಿಕ ನಂಬಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು,ಕೊಡಚಾದ್ರಿ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ಪೂಜಾ ವಿಧಿವಿಧಾನಗಳಿಗೂ ಸಹ ಇದರಿಂದ ತೊಂದರೆ ಉಂಟಾಗಿದೆ. ಕೂಡಲೇ ನಿರ್ಬಂಧ ತೆರವುಗೊಳಿಸಬೇಕು ಎಂದು ಕೊಡಚಾದ್ರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಶಿವರಾಮ ಶೆಟ್ಟಿ ಸಂಪದಮನೆ ಹೇಳಿದರು.


ಇಲ್ಲಿನ ಕಟ್ಟಿನಹೊಳೆಯ ವನ್ಯಜೀವಿ ವಿಭಾಗದ ತನಿಖಾ ಠಾಣೆ ಎದುರು,ಕೊಡಚಾದ್ರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವನ್ಯಜೀವಿ ಇಲಾಖೆ ಕೊಡಚಾದ್ರಿಯನ್ನು ಕೇವಲ ಪ್ರವಾಸಿ ತಾಣವಾಗಿ ಮಾತ್ರ ಏಕಮುಖ ದೃಷ್ಟಿಯಿಂದ ನೋಡುತ್ತಿದ್ದು,ಯಾವುದೇ ಪೂರ್ವಾಪರ ಆಲೋಚನೆ ಮಾಡದೇ ಕೊಡಚಾದ್ರಿಗೆ ನಿರ್ಬಂಧ ವಿಧಿಸಿದೆ. ರಾಜ್ಯ ಹೊರರಾಜ್ಯಗಳಿಂದ ನಿತ್ಯವೂ ಸಾವಿರಾರು ಭಕ್ತರು ಕೊಡಚಾದ್ರಿಗೆ ಬರುತ್ತಿದ್ದು,ಅವರಿಗೆ ದೇವಸ್ಥಾನ ದರ್ಶನ ಲಭಿಸದೇ ನಿರಾಸೆಯಾಗಿದೆ.ಕೂಡಲೇ ನಿರ್ಬಂಧ ತೆರವು ಮಾಡುವಂತೆ ಇಲಾಖೆಗೆ ಮನವಿ ನೀಡಿದ್ದೇವೆ. ಈ ಮನವಿಗೆ ಪುರಸ್ಕಾರ ನೀಡದಿದ್ದರೆ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.


ಸಂಪೆಕಟ್ಟೆ ಗ್ರಾಪಂ ಸದಸ್ಯ ಡಿ.ಕೆ ಸತ್ಯನಾರಾಯಣ ಮಾತನಾಡಿ, ವನ್ಯಜೀವಿ ಕೊಡಚಾದ್ರಿಗೆ ಬರುವ ಭಕ್ತರಿಂದ ಬೇಕಾಬಿಟ್ಟಿ ಹಣ ವಸೂಲು ಮಾಡುತ್ತಿದೆ. ಹೀಗೆ ವಸೂಲು ಮಾಡಿದ ಹಣದಲ್ಲಿ ಕೊಡಚಾದ್ರಿ ರಸ್ತೆ ದುರಸ್ಥಿ ಮಾಡುವುದನ್ನು ಬಿಟ್ಟು,ರಸ್ತೆ ಸರಿಯಿಲ್ಲ ಎಂಬ ಕಾರಣ ನೀಡಿ ಭಕ್ತಾಧಿಗಳಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಕೊಡಚಾದ್ರಿಯಲ್ಲಿ ಬರುವ ಭಕ್ತರು ಹಾಗೂ ಪ್ರವಾಸಿಗರಿಗಾಗಿ ಶೌಚಾಲಯ ವ್ಯವಸ್ಥೆಯನ್ನೂ ಸಹ ಮಾಡಿಲ್ಲ ಎಂದರು.


ವಲಯ ಅರಣ್ಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಉಪ ಅರಣ್ಯಾಧಿಕಾರಿ ರೂಪೇಶ್ ಚೌಹಾಣ್ ಅವರಿಗೆ ಕೂಡಲೇ ನಿರ್ಬಂಧ ತೆರವು ಮಾಡುವಂತೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.


ವ್ಯವಸ್ಥಾಪನಾ ಸಮಿತಿ ಸದಸ್ಯ ಗಣಪತಿ ಗುರುಟೆ ಹಾಗೂ ಗಿರೀಶ್ ಕೆ.ಬಿ ಸರ್ಕಲ್, ಕೃಷ್ಣಮೂರ್ತಿ ಬಾಸ್ತಿ, ರವೀಶ್ ಕಟ್ಟಿನಹೊಳೆ, ಶಿವರಾಮ ಕಟ್ಟಿನಹೊಳೆ ಹಾಗೂ 75ಕ್ಕೂ ಹೆಚ್ಚು ಜೀಪ್ ಹಾಗೂ ಹೋಮ್‌ಸ್ಟೆ ಮಾಲಿಕರು, ಚಾಲಕರು ಮತ್ತು ಇತರರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!