ದುರಸ್ಥಿ ಕಾಣದ ರಸ್ತೆ ; ಗ್ರಾಮಸ್ಥರಿಂದ ಪ್ರತಿಭಟನೆ, ಚುನಾವಣಾ ಬಹಿಷ್ಕಾರದ ಎಚ್ಚರಿಕೆ

0 21

ಹೊಸನಗರ: ತಾಲ್ಲೂಕಿನ ಮೇಲನಬೆಸಿಗೆ ಹಾಗೂ ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ವಸವೆ ರಸ್ತೆ ಹಾಳಾಗಿ ಸುಮಾರು 10 ವರ್ಷಗಳು ಕಳೆದಿದೆ. ಹಿಂದಿನ ವಿಧಾನಸಭೆಯ ಚುನಾವಣೆಯಲ್ಲಿ ಗೃಹಸಚಿವರಾದ ಆರಗ ಜ್ಞಾನೇಂದ್ರರವರು ಹಾಗೂ ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪನವರು ಚುನಾವಣೆ ನಡೆದು ಗೆದ್ದ ತಕ್ಷಣ ವಸವೆ ರಸ್ತೆಯ ರಿಪೇರಿಗೆ ಮೊದಲ ಆಧ್ಯತೆ ನೀಡಿ ರಸ್ತೆ ಕಾಮಗಾರಿ ಮಾಡಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದು ಆಶ್ವಾಸನೆ ಮರೀಚಿಕೆಯಾಗಿ ಉಳಿದಿದ್ದು ಇನ್ನೂ ಒಂದು ತಿಂಗಳಲ್ಲಿ ಚುನಾವಣೆ ಬರುತ್ತದೆ ಅವರು ಆಶ್ವಾಸನೆ ನೀಡಿದ ಭರವಸೆ ಈಡೆರಿಸಿಲ್ಲವೆಂದು ಗ್ರಾಮ ಪಂಚಾಯಿತಿ ಸದಸ್ಯ ಧರ್ಮಪ್ಪನವರ ನೇತೃತ್ವದಲ್ಲಿ ಕರಿನಗೊಳ್ಳಿಯಿಂದ ವಸವೆಗೆ ಹೋಗುವ ಮುಖ್ಯರಸ್ತೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ಪ್ರತಿಭಟನೆ ಧರಣಿಯ ನೇತೃತ್ವವಹಿಸಿದ ಧರ್ಮಪ್ಪನವರು ಮಾತನಾಡಿ ವಸವೆ ಗ್ರಾಮದ ಗ್ರಾಮಸ್ಥರಾದ ನಾವು ಸುಮಾರು 10 ವರ್ಷಗಳಿಂದ ಕರಿನಗೊಳ್ಳಿಯಿಂದ ವಸವೆ ಮುಖ್ಯ ರಸ್ತೆಯನ್ನು ದುರಸ್ಥಿ ಮಾಡಲು ಸಾಕಷ್ಟು ಮನವಿ ಸಲ್ಲಿಸಿದ್ದರು ಇಲ್ಲಿಯವರೆಗೂ ದುರಸ್ಥಿ ಮಾಡದೇ ಹಾಗೆಯೇ ಬಿಟ್ಟಿರುತ್ತಾರೆ. ನಮ್ಮ ಗ್ರಾಮಕ್ಕೆ ರಸ್ತೆಯ ಮಾರ್ಗ ಇರುವುದಿಲ್ಲ. ಆದ್ದರಿಂದ ಎರಡು ಗ್ರಾಮದ ವಸವೆ ಮತ್ತು ಕರಿನಗೊಳ್ಳಿ ಮುಖ್ಯ ರಸ್ತೆಯಲ್ಲಿ ಧರಣಿ ಸತ್ಯಗ್ರಹ ನಡೆಸಲು ತೀರ್ಮಾನಿಸಲಾಗಿದ್ದು ಅದರಂತೆ ದೇವರಸಲಿಕೆ ವಸವೆ ಮುಖ್ಯ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ನಡೆಸುತ್ತೀದ್ದೇವೆ. ನಂತರ ಹೊಸನಗರದ ತಾಲ್ಲೂಕು ಕಛೇರಿಗೆ ನಮ್ಮ ರಸ್ತೆಯ ಬೇಡಿಕೆಯಾಗಿ ಮನವಿ ಪತ್ರ ಸಲ್ಲಿಸಲಿದ್ದೇವೆ ಎಂದರು.

ಚುನಾವಣೆ ಬಹಿಷ್ಕಾರ:
ಹೊಸನಗರ ತಾಲ್ಲೂಕು ಕಛೇರಿಯ ಗ್ರೇಡ್ 2 ತಹಶೀಲ್ದಾರ್ ರಾಕೇಶ್‌ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ದೇವರ ಸಲಿಕೆಯ ಗ್ರಾಮಸ್ಥರಾದ ಕೇಶವಪ್ಪ ಗೌಡ ಮಾತನಾಡಿ, ನಾವು ಸುಮಾರು 10ವರ್ಷಗಳಿಂದ ವಸವೆ – ದೇವರಸಲಿಕೆ ರಸ್ತೆಯ ದುರಸ್ಥಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ ನಮಗೆ ಬರೀ ಆಶ್ವಾಸನೆಯಲ್ಲಿಯೇ ರಾಜಕೀಯ ನಾಯಕರು ಕಳೆಯುತ್ತಿದ್ದಾರೆ. ಒಂದು ಕೋಟಿ ರೂ. ಮಂಜೂರಾತಿ ಮಾಡಿದ್ದೇವೆ ಒಂದೂವರೆ ಕೋಟಿ ರೂ. ಮಂಜೂರಾತಿ ಮಾಡಿದ್ದೇವೆ ಎಂಬ ಸುಳ್ಳು ಆಶ್ವಾಸನೆಯಲ್ಲಿಯೇ ಕಾಲ ಕಳೆದಿದ್ದು ಆದರೆ ಇಲ್ಲಿಯವರೆಗೆ ರಸ್ತೆಯ ದುರಸ್ಥಿಯ ಭಾಗ್ಯ ಕಂಡಿಲ್ಲ. ಮುಂದೆ ಬರುವ ವಿಧಾನಸಭೆಯ ಚುನಾವಣೆಯ ಒಳಗೆ ರಸ್ತೆ ಕಾಮಗಾರಿ ಕೈಗೊಳ್ಳದಿದ್ದರೇ ವಿಧಾನಸಭಾ ಚುನಾವಣೆ ಹಾಗೂ ತಾಲ್ಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಲು ನಮ್ಮ ಗ್ರಾಮಸ್ಥರು ತೀರ್ಮಾನಿಸಿದ್ದು ಅದರಂತೆ ಮೂರು ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದರು.


ಈ ಸಂದರ್ಭದಲ್ಲಿ ಅಲ್ಲಿನ ಗ್ರಾಮಸ್ಥರಾದ ಬಸವಣ್ಯಪ್ಪ ಗೌಡ, ಕೀರ್ತಿಗೌಡ ಗೌಡ, ಚನ್ನಬಸಪ್ಪ, ಕೌಶಿಕ್, ರಮೇಶ್, ಕೃಷ್ಣಮೂರ್ತಿ ಎಸ್,ಸಿ, ನಾಗರಾಜ್ ಗೌಡ, ಕೇಶವಪ್ಪ ಗೌಡ, ಗಣೇಶ್, ಸುರೇಶ್ ಇನ್ನೂ ಮುಂತಾದವರು ಪ್ರತಿಭಟನೆ ಧರಣಿಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!