ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಉದ್ಯಮಶೀಲತೆ ಅವಶ್ಯಕ ; ಸಿ.ಎಲ್ ರಮೇಶ್

0 105


ರಿಪ್ಪನ್‌ಪೇಟೆ : ಮಹಿಳೆಯರ ಸ್ವಾವಲಂಬನೆಯ ಬದುಕಿಗೆ ಉದ್ಯಮಶೀಲತೆ ಅವಶ್ಯಕ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯದ ಬಗ್ಗೆ ಪ್ರತಿಯೊಬ್ಬ ಮಹಿಳೆ ಅರಿವನ್ನು ಹೊಂದಿರಬೇಕು ಎಂದು ಸಂಪನ್ಮೂಲ ವ್ಯಕ್ತಿ ರಮೇಶ್ ಸಿ.ಎಲ್. ಹೇಳಿದರು.


ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಮಲೆನಾಡು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಬೆಳಂದೂರು ಇವರ ಸಂಯುಕ್ತ ಆಶಯದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ಉದ್ಯಮಶೀಲತೆ ತಿಳುವಳಿಕೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ, ಅದರ ಸದುಪಯೋಗವನ್ನು ಪಡೆಯುವುದರ ಮೂಲಕ ಮಹಿಳೆಯರು ಕೌಶಲ್ಯ ಅಭಿವೃದ್ಧಿಯನ್ನು ಹೊಂದಿ ಉದ್ಯಮಗಳನ್ನು ಸ್ಥಾಪಿಸಿದರೆ ನೂರಾರು ಮಹಿಳೆಯರಿಗೆ ಉದ್ಯೋಗವನ್ನು ನೀಡಲು ಸಹಕಾರಿಯಾಗುತ್ತದೆ ಹಾಗೆಯೇ ದೇಶದ ಹಾಗೂ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೌಶಲ್ಯದ ಕಲಿಕೆಯಲ್ಲಿ ಆಸಕ್ತಿ, ಪರಿಶ್ರಮ, ಸಹನೆ ಮತ್ತು ತಾಳ್ಮೆ ಯನ್ನು ಹೊಂದಿ ಕಾರ್ಯನಿರ್ವಹಿಸಿದರೆ ಮಾತ್ರ ಬದುಕಿನಲ್ಲಿ ಯಶಸ್ವಿ ಕಾಣಬಹುದು ಎಂದರು.


ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಜಂಟಿ ನಿರ್ದೇಶಕ ಆರ್. ಪಿ. ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಹಿಳೆಯರು ಸಾವಲಂಬಿಯ ಬದುಕಿಗೆ ಹೆಚ್ಚಿನ ಮಹತ್ವವನ್ನು ನೀಡಿದರೆ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಯ ತರಬೇತಿಯನ್ನು ಪಡೆದುಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬಹುದೆಂದು ತಿಳಿಸಿದರು. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಹಿಳಾ ಅಭಿವೃದ್ಧಿಗಾಗಿ ಅನುಷ್ಠಾನಗೊಳಿಸಿರುವ ಯೋಜನೆಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು.


ಸಭೆಯ ಅಧ್ಯಕ್ಷತೆಯನ್ನು ಮಲೆನಾಡು ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಟ್ರಸ್ಟ್‌ನ ಅಧ್ಯಕ್ಷೆ ಲೀಲಾ ಶಂಕರ್ ವಹಿಸಿದ್ದರು. ಕುಸುಮ ಅರಸಾಳು ಪ್ರಾರ್ಥಿಸಿದರು. ಸುಮಂಗಲ ಸ್ವಾಗತಿಸಿದರು. ಕೌಶಲ್ಯ ಅಭಿವೃದ್ಧಿ ತರಬೇತುದಾರ ಅವಿನಾಶ್ ಎ. ನಿರೂಪಿಸಿ, ಜಯಶ್ರೀ ವಂದಿಸಿದರು.

Leave A Reply

Your email address will not be published.

error: Content is protected !!