ಮಾವುತರು ಮತ್ತು ಕಾವಾಡಿಗರಿಗೆ ಸಮವಸ್ತ್ರ ವಿತರಣೆ | ಶ್ರಮಿಕರನ್ನು ಗೌರವಿಸುವುದು ಮಾದರಿ ಕೆಲಸ ; ಡಿಎಫ್‌ಒ ಪ್ರಸನ್ನಕೃಷ್ಣ

0 119

ಶಿವಮೊಗ್ಗ : ಸಮಾಜದಲ್ಲಿ ಶ್ರಮಿಕ ವರ್ಗದ ನೌಕರರನ್ನು ಗುರುತಿಸಿ ಸಹಾಯ ಮಾಡುವುದು ಮಾದರಿ ಕೆಲಸ ಎಂದು ಶಿವಮೊಗ್ಗ ವನ್ಯಜೀವಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್ ಹೇಳಿದರು.

ಅವರು ಗುರುವಾರ ಸಕ್ರೆಬೈಲ್‌ನಲ್ಲಿ ವೈಲ್ಡ್ ಟಸ್ಕರ್ ಸಂಸ್ಥೆ ಆಯೋಜಿಸಿದ್ದ ಮಾವುತರು ಮತ್ತು ಕಾವಾಡಿಗರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರತಮದಲ್ಲಿ ಮಾತನಾಡಿ, ಅರಣ್ಯ ಇಲಾಖೆಯಲ್ಲಿನ ಕೆಳಹಂತದ ಸಿಬ್ಬಂದಿ ತಮಗಿರುವ ಕನಿಷ್ಟ ಸೌಲಭ್ಯದಲ್ಲಿಯೂ ಉತ್ತಮ ಕೆಲಸ ಮಾಡುತ್ತಾರೆ. ಅವರ ಶ್ರಮದಿಂದ ಅರಣ್ಯ ಮತ್ತು ವನ್ಯ ಪ್ರಾಣಿಗಳ ರಕ್ಷಣೆಯಾಗುತ್ತಿದೆ.ಇಂತಹ ಸಿಬ್ಬಂದಿಗಳಿಗೆ ಸಾಮಾಜಿಕ ಸೇವಾ ಸಂಸ್ಥೆ ಮಾಡುತ್ತಿರುವ ನೆರವು ಸ್ಫೂರ್ತಿದಾಯಕ ಎಂದರು.


ಸಂಸ್ಥೆ ಗೌರವ ಅಧ್ಯಕ್ಷರಾದ ಎಂ.ಶ್ರೀಕಾಂತ್ ಅವರು ಮಾತನಾಡಿ, ಕೊರೋನದಂತಹ ಸಂಕಷ್ಟ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸಂಸ್ಥೆ ಸ್ಪಂದಿಸಿದೆ. ಮಾವುತರು ಮತ್ತು ಕಾವಾಡಿಗಳು ಅರಣ್ಯದಲ್ಲಿ ಆನೆಯೊಂದಿಗೇ ಕಷ್ಟದ ಜೀವನ ಮಾಡುತ್ತಾರೆ. ಸರಕಾರದಿಂದ ಸಿಗುವ ಸೌಲಭ್ಯಗಳೂ ಅವರಿಗೆ ಸಮರ್ಪಕವಾಗಿಲ್ಲ. ಈ ಬಗ್ಗೆ ಸಚಿವರ ಗಮನ ಸೆಳೆಯಲಾಗುವುದು. ನಿಮ್ಮ ಶ್ರಮವನ್ನು ಯಾವತ್ತೂ ಗೌರವಿಸುತ್ತೇವೆ. ಸಂಸ್ಥೆ ಈ ರೀತಿಯ ಜನಪರ ಕೆಲಸವನ್ನು ಮುಂದೆಯೂ ಮಾಡಲಿದೆ ಎಂದರು.


ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಮಾವುತರು ಮತ್ತು ಕಾವಾಡಿಗಳು ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಾರೆ. ಅವರ ನೆರವಿಗೆ ವೈಲ್ಡ್ ಟಸ್ಕರ್ ಸಂಸ್ಥೆ ಮುಂದಾಗಿರುವುದು ಮಾದರಿಯಾಗಿದೆ. ಶ್ರೀಕಾಂತ್ ಮತ್ತು ಜೇಸುದಾಸ್ ಅವರ ಮಾನವೀಯ ಕಾರ್ಯ ಮೆಚ್ಚುವಂತಾಗಿದೆ. ಮಾವುತರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.


ಸಂಸ್ಥೆ ನಿರ್ದೇಶಕ ಪಿ.ಜೇಸುದಾಸ್ ಮಾತನಾಡಿ, ಸಂಸ್ಥೆ ವನ್ಯಜೀವಿ ಸಂಶೋಧನೆ, ಅರಣ್ಯ ಬೆಳವಣಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ಇಲಾಖೆಯ ಕೆಳಹಂತದ ನೌಕರರ ಆರೋಗ್ಯ, ಮಕ್ಕಳ ಶಿಕ್ಷಣ ಇತ್ಯಾದಿ ಕೆಲಸ ಮಾಡಲಿದೆ ಎಂದು ಸಂಸ್ಥೆ ಉದ್ದೇಶಗಳನ್ನು ವಿವರಿಸಿದರು.


ವನ್ಯಜೀವಿ ವೈದ್ಯ ಡಾ.ವಿನಯ್, ಉಪ ವಲಯ ಅರಣ್ಯಾಧಿಕಾರಿ ವೇದಿಕೆಯಲ್ಲಿದ್ದರು. ಸಕ್ರೆಬೈಲ್ ಮಾವುತರು, ಕಾವಾಡಿಗಳು, ನಿವೃತ್ತ ಜಮೇದಾರರಿಗೆ ಸಮವಸ್ತ್ರ ವಿತರಿಸಿ ಅವರೊಂದಿಗೆ ಔತಣಕೂಟವನ್ನು ಸಂಸ್ಥೆ ಆಯೋಜಿಸಿತ್ತು. ವನ್ಯಜೀವಿ ಪ್ರೇಮಿಗಳು, ಶಿವಮೊಗ್ಗ ಪತ್ರಕರ್ತ ಮಿತ್ರರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!