ಸಿ.ಎಸ್. ಷಡಾಕ್ಷರಿ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ಮಾನಹಾನಿ ; ಹೊಸನಗರ ತಾಲ್ಲೂಕು ಸಂಘದಿಂದ ತಹಶೀಲ್ದಾರ್‌ಗೆ ಮನವಿ

0 46


ಹೊಸನಗರ: ರಾಜ್ಯ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರ ವಿರುದ್ಧ ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಹಾನಿ ಉಂಟುಮಾಡಿರುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹೊಸನಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಂ ಬಸವಣ್ಯಪ್ಪನವರ ನೇತೃತ್ವದಲ್ಲಿ ತಹಶೀಲ್ದಾರ್ ಧಮಾಂತ ಗಂಗಾಧರ ಕೋರಿಯವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.


ಮನವಿ ಪತ್ರ ಸಲ್ಲಿಸಿ ಮಾತನಾಡಿದ ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಬಸವಣ್ಯಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘವು 1920ರಲ್ಲಿ ಸ್ಥಾಪನೆಯಾಗಿದ್ದು, ಸಂಘ ಸಂಸ್ಥೆಗಳ ನೋಂದಣಿ ಕಾಯ್ದೆಯನ್ವಯ ನೋಂದಣಿಯಾಗಿ, ಸರ್ಕಾರದ ಮಾನ್ಯತೆಯನ್ನು ಹೊಂದಿ ಸುಮಾರು 5.25 ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ.
ರಾಜ್ಯಪಾಲರಾಗಿದ್ದ ದಿ|| ಎನ್.ಧರ್ಮವೀರರವರ ದೂರದೃಷ್ಠಿ ಹಾಗೂ ಅವರು ಸರ್ಕಾರಿ ನೌಕರರ ಬಗ್ಗೆ ಹೊಂದಿದ್ದ ಕಾಳಜಿಯ ಪ್ರತೀಕವಾಗಿ ನಿವೇಶನ ಮಾಡಿದ್ದರ ಪರಿಣಾಮವಾಗಿ ಬೆಂಗಳೂರು ನಗರದ ಕಬ್ಬನ್ ಉದ್ಯಾನವನದಲ್ಲಿ ಸುಸಜ್ಜಿತ ಆಡಳಿತ ಕಛೇರಿ, ಸಭಾಂಗಣ ಸೇರಿದಂತೆ ಸುಮಾರು 58 ಕೊಠಡಿಗಳ ಭವನವನ್ನು ಸಂಘವು ಹೊಂದಿದ್ದು, ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸರ್ಕಾರಿ ನೌಕರರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ. ಸಂಘವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ರಾಜ್ಯಾದ್ಯಂತ 200ಕ್ಕೂ ಹೆಚ್ಚಿನ ವಿವಿಧ ವೃಂದ ಸಂಘಗಳ ಸಂಯೋಜನೆಯನ್ನು ಹೊಂದಿರುತ್ತದೆ.
ಅದರಂತೆ ನಮ್ಮ ಸಂಘದ ತಾಲ್ಲೂಕು / ಜಿಲ್ಲಾ ಸಂಘಗಳೂ ಸಹ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯಾದ್ಯಂತ ಸಂಘಟನೆ ಈ ಹಂತಕ್ಕೆ ಬೆಳೆಯಲು ಹಿಂದಿನ ಹಲವಾರು ಅಧ್ಯಕ್ಷರುಗಳ ಪರಿಶ್ರಮ ಕಾರಣವಾಗಿದೆ. ಸಿ.ಎಸ್. ಷಡಾಕ್ಷರಿಯವರು 2019-2024ನೇ ಸಾಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಕಳೆದ ನಾಲ್ಕು ವರ್ಷಗಳಲ್ಲಿ ನೌಕರ ಸ್ನೇಹಿ ಕಾರ್ಯಗಳನ್ನು ಕೈಗೊಂಡಿರುವುದು ನಮ್ಮ ಸರ್ಕಾರಿ ನೌಕರರ ಹೆಮ್ಮೆಯ ಸಂಗತಿಯಾಗಿದ್ದು ದಿನಾಂಕ: 01-03-2023ರಂದು ಸಂಘವು ಅನಿರ್ಧಿಷ್ಠಾವಧಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಸಂಘದ ಸಂಘಟನಾ ಶಕ್ತಿಗೆ ಮಣಿದು, ಸರ್ಕಾರವು ವೇತನ ಆಯೋಗದ ಭಾಗವಾಗಿ ಶೇ. 17%ರಷ್ಟು ಮಧ್ಯಂತರ ಪರಿಹಾರ ಭತ್ಯೆಯನ್ನು ನೀಡಿರುತ್ತದೆ.

ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರು, ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರುಗಳ ಮತ್ತು ಎಲ್ಲಾ ಹಂತದ ಪದಾಧಿಕಾರಿಗಳ ಮೇಲೆ “ಅವವ್ವಸ್ಥಿತ ವ್ಯವಸ್ಥಾಪನೆ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ಸಂಘಕ್ಕೆ ಹಾನಿ ಉಂಟುಮಾಡಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ” ಸುಳ್ಳು ದೂರು ನೀಡುವ ಮೂಲಕ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಸಂಘಟನೆಯ ತೇಜೋವಧೆ ಮಾಡುವ ದುರುದ್ದೇಶದಿಂದ ಕೂಡಿದ ಆಧಾರರಹಿತ ಆರೋಪಗಳನ್ನು ಮಾಡಿ, ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಮ್ಮ ಸಂಘಟನೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಶಾಂತರಾಮ, ಗುರುಸ್ವಾಮಿ, ಮೆಹಬೂಬ್ ಬಾಷಾ ಎಂ, ಶಿವರುದ್ರಯ್ಯ ವಿ.ವಿ ಹಾಗೂ ನಿಂಗೇಗೌಡ್ರು ರವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕು ನೌಕರರ ಸಂಘದ ಗೌರವಾಧ್ಯಕ್ಷರಾದ ಜಗದೀಶ್ ಕಾಗಿನೆಲೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ, ರಾಜ್ಯ ನೌಕರರ ಸಂಘದ ಸದಸ್ಯ ಸುದೀಂದ್ರಕುಮಾರ್, ಖಜಾಂಚಿ ಪ್ರಭಾಕರ್, ಉಪಾಧ್ಯಕ್ಷ ಒಡೆಯರ್ ವಿನಯ್, ಆರೋಗ್ಯ ಇಲಾಖೆಯ ಗಜೇಂದ್ರ, ಶಿವಪ್ಪ, ಸತೀಶ, ಸ್ವಾಮಿರಾವ್, ಮಾಲತೇಶ್, ವಿನಯ್ ಎಂ ಆರಾಧ್ಯ, ನಟರಾಜ್ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಆರ್ ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ವನಮಾಲ, ಶಿಲ್ಪಾ, ಭೂಮಿಕ, ದೀಪು, ರಾಘವೇಂದ್ರ, ಗಣೇಶ, ಸೌಮ್ಯ ಸರ್ಕಾರಿ ಕಛೇರಿಯ ನೌಕರರು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!