ಹೊಸನಗರ : ರೈತ ವಿರೋಧಿ ನೀತಿಯೊಂದಿಗೆ ಮಲೆನಾಡಿನ ಶರಾವತಿ ಮುಳುಗಡೆ ಸಂತ್ರಸ್ತರ ಹಿತ ಕಾಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಭ್ರಷ್ಟ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಲು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಕರೆ ನೀಡಿದರು.
ಇಂದು ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹೊಸನಗರ -ಸಾಗರ ಭಾಗದ ರೈತರ ಬಹುದೊಡ್ಡ ಸಮಸ್ಯೆ ಶರಾವತಿ ಮುಳುಗಡೆ. ಸಾವಿರಾರು ಮುಳುಗಡೆ ಸಂತ್ರಸ್ತ ಕುಟುಂಬಗಳು ಕಾನೂನು ಹೋರಾಟದಲ್ಲಿ ಸೋಲು ಕಂಡಿವೆ. ಇದಕ್ಕೆ ಬಿಜೆಪಿ ಸರ್ಕಾರವೇ ನೇರ ಕಾರಣವಾಗಿದ್ದು, ಈ ರೈತ ವಿರೋಧಿ ಸರ್ಕಾರ ಕಿತ್ತೊಗೆಯಲು ಇದು ಸಕಾಲ ಎಂದರು.
ರಾಜ್ಯದಲ್ಲಷ್ಟೇ ಅಲ್ಲದೆ ದೇಶದಲ್ಲೂ ರೈತ ವಿರೋಧಿ ಕಾನೂನುಗಳೇ ವಿಜೃಂಭಿಸುತ್ತಿರುವುದು ವಿಷಾದನೀಯ. ಬಂಡವಾಳ ಶಾಹಿಗಳ ಸರ್ಕಾರ ಎಂದೇ ಬಿಂಬಿಸಿಕೊಂಡಿರುವ ಬಿಜೆಪಿ, ರೈತ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂತಹ ಜನವಿರೋಧಿ ಸರ್ಕಾರವನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತೆಸೆಯಲು ಇದು ಸಕಾಲ. ಹೀಗಾಗಿ ರಾಜ್ಯ ರೈತ ಸಂಘ ಬಿಜೆಪಿಯೇತರ ಪಕ್ಷಗಳನ್ನು ಬೆಂಬಲಿಸುತ್ತಿದ್ದು, ರಾಜ್ಯದ ರೈತರು, ಕೂಲಿ ಕಾರ್ಮಿಕರು, ನಿರುದ್ಯೋಗಿ ಯುವ ಜನತೆ ಬಿಜೆಪಿ ಹೊರತು ಪಡಿಸಿದ ಪಕ್ಷಗಳ ಗೆಲುವಿನ ಮೂಲಕ ರೈತ ಹಿತವನ್ನು ಕಾಯುವವರನ್ನು ಬೆಂಬಲಿಸುವಂತೆ ಶಿವಾನಂದ್ ಕುಗ್ವೆ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಎನ್. ಡಿ. ವಸಂತ್ ಕುಮಾರ್ ಮಾತನಾಡಿ, ಬಿಜೆಪಿ ಸರಕಾರ ರೈತ ವಿರೋಧಿ ಕಾನೂನುಗಳ ಮೂಲಕ ನಿರಂತರ ದ್ರೋಹ ಎಸುಗುತ್ತಲೇ ಬರುತ್ತಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಎಲ್ಲಾ ದಿನಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ಲೂಟಿಕೋರ ಸರ್ಕಾರವಾಗಿದೆ. ಇಂತಹ ಬಂಡವಾಳ ಶಾಹಿ ಸರ್ಕಾರವನ್ನು ರಾಜ್ಯದ ಜನತೆ ಕಿತ್ತೊಗೆಯುವಂತೆ ಮನವಿ ಮಾಡಿದರು.
ರೈತ ಸಹಕಾರಿಯಾದ ಯಾವುದೇ ಯೋಜನೆಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ರೈತ ವಿರೋಧಿ ಕಾಯ್ದೆಗಳಿಂದ ಅದಾನಿ, ಅಂಬಾನಿ ತಿಜೋರಿ ತುಂಬುತ್ತಿದೆ. ಇಂತಹ ಅನಿಷ್ಠ ಸರ್ಕಾರ ಯಾವುದೇ ಕಾರಣಕ್ಕೂ ರಾಜ್ಯಕ್ಕೆ ಯೋಗ್ಯವಲ್ಲ. ಇದನ್ನು ಮುಂಬರುವ ಮೇ 10ರ ಚುನಾವಣೆಯಲ್ಲಿ ತೊಲಗಿಸೋಣ. ಬಿಜೆಪಿ ಹೊರತು ಪಡಿಸಿದ ಯಾವುದೇ ಗೆಲ್ಲುವ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದು ಎನ್. ಡಿ. ವಸಂತ್ ಕುಮಾರ್ ಮನವಿ ಮಾಡಿದರು.
ಈ ಸಂಬಂಧ ರಾಜ್ಯ ರೈತ ಸಂಘ ಬೆಂಗಳೂರಲ್ಲಿ ಕರೆದ ಸಭೆಯಲ್ಲಿ ಬಿಜೆಪಿ ಹೊರತು ಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಪಾಲ್ಗೊಂಡು ರೈತ ಹಿತ ಕಾಯುವ ಭರವಸೆ ನೀಡಿವೆ. ಹೀಗಾಗಿ ಆಯಾ ಕ್ಷೇತ್ರವಾರು ಬಿಜೆಪಿ ಹೊರತು ಪಡಿಸಿದ ಪ್ರಬಲ ಗೆಲ್ಲುವ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ರಾಜ್ಯದ ಎಲ್ಲೆಡೆ ರೈತ ಸಂಘ ಪ್ರಚಾರ ನಡೆಸುತ್ತಿದೆ ಎಂದು ರೈತ ಮುಖಂಡ ರಮೇಶ್ ಐಗಿನಬೈಲು ತಿಳಿಸಿದರು.
ರಾಜ್ಯದಲ್ಲಿ ರೈತನಿಗೆ ಅಗತ್ಯವಾದ ಗೊಬ್ಬರ, ಔಷಧಿ ಬೆಲೆಯನ್ನು ಗಗನಕ್ಕೆ ಏರಿಸಿರುವ ಬಿಜೆಪಿ ಸರ್ಕಾರ, ರೈತನಿಂದಲೂ ಪರೋಕ್ಷವಾಗಿ ತೆರೆಗೆಯ ಹೆಸರಲ್ಲಿ ಲೂಟಿ ಮಾಡುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಮಂಜುನಾಥ್ ಬ್ಯಾಣದ ಆರೋಪಿಸಿದರು.
ಐದು ವರ್ಷಗಳ ಹಿಂದೆ ಏಳುನೂರು, ಎಂಟು ನೂರು ಇದ್ದ ಗೊಬ್ಬರದ ಬೆಲೆ ಇಂದು ಎರಡು ಸಾವಿರ ದಾಟಿದೆ. ಆದರೆ ಒಂದು ಕ್ವಿಂಟಲ್ ಭತ್ತದ ಬೆಲೆ ಈಗಲೂ ಒಂದೂವರೆ ಸಾವಿರ ದಾಟುತ್ತಿಲ್ಲ. ಹಾಗಾದರೆ ಬಿಜೆಪಿ ಸರ್ಕಾರ ರೈತ ಪರ ಆಗುವುದು ಹೇಗೆ ? ಎಂದು ಅವರು ಪ್ರಶ್ನಿಸಿದರು.
ರೈತ ವಿರೋಧಿ ಕಾಯ್ದೆಗಳ ಮೂಲಕ ಕೃಷಿ ಭೂಮಿಯನ್ನು ಬಂಡವಾಳ ಶಾಹಿಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೇರವಾಗಿ ಮಾರುಕಟ್ಟೆ ಮಾಡಿಕೊಟ್ಟಿರುವ ಬಿಜೆಪಿ ಸರ್ಕಾರ ಇಲ್ಲಿಯೂ ಪರ್ಸೆಂಟೆಜ್ ವ್ಯವಹಾರ ನಡೆಸುವ ಮೂಲಕ ಬಂಡವಾಳ ಶಾಹಿಗಳ ಬಿಜೆಪಿ ಆಗಿದೆ. ಕೆಲವೇ ದಿನದಲ್ಲಿ ಉಣ್ಣುವ ಅನ್ನಕ್ಕೂ ಅಹಕಾರ ಬರಲಿದೆ. ಹೀಗಾಗಿ ಇಂತಹ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಹೊಸ ಸರ್ಕಾರಕ್ಕೆ ಮತದಾರರು ಅವಕಾಶ ಮಾಡಿಕೊಡಬೇಕು ಎಂದು ಮಂಜುನಾಥ್ ಬ್ಯಾಣದ ಮನವಿ ಮಾಡಿದರು.
ರೈತ ಮುಖಂಡ ಗಣಪತಿ ಮಾಕನ ಕಟ್ಟೆ ಮಾತನಾಡಿ, ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ ನೀಡುವುದು ಸೇರಿದಂತೆ, ರೈತ ಪರವಾದ ಯಾವುದೇ ಯೋಜನೆ ರೂಪಿಸಲು ವಿಫಲವಾದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಸೋಣ ಎಂದು ಮನವಿ ಮಾಡಿದರು.
ಸುದ್ದಿಗೊಷ್ಟಿಯಲ್ಲಿ ಪಿ. ಎಲ್. ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹುಚ್ಚಪ್ಪ ಕೆಳದಿ ಮೊದಲಾದವರು ಉಪಸ್ಥಿತರಿದ್ದರು.