ಎರಡು ಬಾರಿ ಶಾಸಕರಾಗಿ ಕ್ಷೇತ್ರದ ಸಮಸ್ಯೆ ಕುರಿತು ಶಾಸನಸಭೆಯಲ್ಲಿ ಧ್ವನಿ ಎತ್ತದವರಿಂದ ಅಭಿವೃದ್ಧಿ ಸಾಧ್ಯವೇ ? ಹರತಾಳು ಹಾಲಪ್ಪ

0 57

ರಿಪ್ಪನ್‌ಪೇಟೆ : ಕಳೆದ ಎರಡು ಭಾರಿ ಶಾಸಕರಾಗಿ ಕ್ಷೇತ್ರದ ಸಮಸ್ಯೆಗಳ ಕುರಿತು ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತದದವರಿಂದ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯವಾಗುವುದು ? ನಾನು ಹೊಸನಗರ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದಂತಹ ಕೆಲಸಗಳು ಬಿಟ್ಟರೆ ನಂತರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ ಎಂದು ಕ್ಷೇತ್ರದ ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.


ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸುಮಾರು 5.50 ಕೋಟಿ ರೂ. ವೆಚ್ಚದ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅಭಿನಂದನೆ ಸ್ವೀಕರಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಸಾಗರ ರಸ್ತೆಯ ಕಾಲೇಜ್ ಬಳಿಯಿಂದ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆ ಅಗಲೀಕರಣ ಮಾಡುವುದರ ಮೂಲಕ ಡಿವೈಡರ್ ಅಳವಡಿಸಿ ಶಾಲಾ ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಲು ಸುಸಜ್ಜಿತ ರಸ್ತೆ ನಿರ್ಮಿಸಲು ಗ್ರಾಮದವರು ಸಹಕರ ನೀಡುವಂತೆ ಕೋರಿ ಮುಂದಿನ ದಿನಗಳಲ್ಲಿ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೊಸನಗರ-ಶಿವಮೊಗ್ಗ-ಸಾಗರ-ತೀರ್ಥಹಳ್ಳಿ ರಸ್ತೆಯ ನಾಲ್ಕು ಕಿ.ಮೀ.ರಸ್ತೆಯನ್ನು ಅಭಿವೃದ್ದಿ ಪಡಿಸಲು ಹೆಚ್ಚಿನ ಅನುದಾನ ತರುವುದಾಗಿ ಹೇಳಿದರು.


ಎರಡು ವರ್ಷಗಳ ಕಾಲ ಶಾಸಕರಾಗಿ ಕಾರ್ಯ ನಿರ್ವಹಿಸಿ ವಿಧಾನಸಭಾ ಕಲಾಪದಲ್ಲಿ ಒಂದು ಮಾತನ್ನು ಆಡದೇ
ರೇಸಾರ್ಟ್ ರಾಜಕಾರಣ ಮಾಡಿಕೊಂಡು ಅಧಿಕಾರ ಅನುಭವಿಸಿ ಈಗ ಮಾಜಿಯಾಗಿರುವ ಸಾಗರ, ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರೊಬ್ಬರು ಕಲರ್ ಕಲರ್ ಬಟ್ಟೆ ಹಾಕಿಕೊಂಡು ಕಪ್ಪು ಕನ್ನಡ ಬಳಸಿ ಬಂಗಾರಪ್ಪರಂತಾಗಲು ಹೋಗುತ್ತಿದ್ದಾರೆ. ಬಂಗಾರಪ್ಪನವರಿಗೆ ಸರಿಸಾಟಿ ಯಾರು ಇಲ್ಲ ಅವರ ವ್ಯಕ್ತಿತ್ವವೇ ಬೇರೆ ಎಂದ ಅವರು ಮದುವೆ ಮನೆ ಮಕ್ಕಳ ಹುಟ್ಟು ಹಬ್ಬ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಶುಭಸಮಾರಂಭಗಳಲ್ಲಿ ಭಾಗವಹಿಸಿ ಅಲ್ಲಿ ನೆರದವರ ಹೆಗಲ ಮೇಲೆ ಕೈಹಾಕಿಕೊಂಡು ಪೋಟೋ ಪೋಸ್ ಕೊಡುವುದು ಅಭಿವೃದ್ದಿಯ ಸಂಕೇತವಲ್ಲ. ಹಾಗೆಯೇ ಕ್ಷೇತ್ರದಲ್ಲಿ ಅಗಿರುವಂತಹ ಅಭಿವೃದ್ದಿ ಕಾರ್ಯಗಳನ್ನು ಸಹಿಸದೇ ಹೊಟ್ಟೆಕಿಚ್ಚಿನಿಂದ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಮತದಾರರನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ, ಹೊಟ್ಟೆ ಕಿಚ್ಚು ಬಿಟ್ಟು ಸ್ವಾಭಿಮಾನದಿಂದ ಇರಲಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಪರೋಕ್ಷವಾಗಿ ಕುಟುಕಿದರು.


ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಕಂಡಿದ್ದು ಸಾಕಷ್ಟು ಅಭಿವೃದ್ದಿ ಕಾರ್ಯಗಳು ಪ್ರಗತಿಯಲ್ಲಿದ್ದು ಕೋಟ್ಯಂತರ ರೂಪಾಯಿಗಳ ಅನುದಾನವನ್ನು ಡಬಲ್ ಇಂಜಿನ್ ಸರ್ಕಾರ ಕ್ಷೇತ್ರದ ಅಭಿವೃದ್ದಿಗೆ ನೀಡಿದೆ ಎಂದು ಹೇಳಿದ ಅವರು ಈ ಭಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಮತ ನೀಡುವುದರ ಮೂಲಕ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ದಿಗೆ ಸಹಕರಿಸಬೇಕು ಎಂದರು.


ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಬಿಜೆಪಿ ತಾಲ್ಲೂಕ್ ಅಧ್ಯಕ್ಷ ಗಣಪತಿ ಬಿಳಗೋಡು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave A Reply

Your email address will not be published.

error: Content is protected !!