ಅರಸಾಳಿನಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ‌ | ಸಂಸದ ಬಿವೈಆರ್ ರವರಿಗೆ ಕಾಂಗ್ರೆಸ್ ಮುಖಂಡರ ಅಭಿನಂದನೆ

0 99


ರಿಪ್ಪನ್‌ಪೇಟೆ : ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ ರೈಲ್ವೆ ಪ್ರಯಾಣಿಕರ ಮನವಿಗೆ ಸ್ಪಂದಿಸಿ ಅರಸಾಳು ಗ್ರಾಮದಲ್ಲಿರುವ ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ದೊರಕಿಸಿಕೊಟ್ಟ ಸಂಸದ ಬಿ ವೈ ರಾಘವೇಂದ್ರರವರಿಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ಅಭಿನಂದನೆ ಸಲ್ಲಿಸಿದ್ದಾರೆ.


ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿನ ಕುವೆಂಪು ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು, ಹೊಸನಗರ ತಾಲೂಕಿನಲ್ಲಿ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿದ್ದರು ನಿಲುಗಡೆ ಇರಲಿಲ್ಲ. ಅರಸಾಳಿನ ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ರೈಲ್ವೆ ಇಲಾಖೆಯಿಂದ ಅನುಮತಿ ದೊರೆತಿದೆ.
ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನ
ಹೊಸನಗರ, ನಗರ, ಮಾಸ್ತಿಕಟ್ಟೆ, ರಾಮಚಂದ್ರಪುರ ಮಠ, ಕೊಡಚಾದ್ರಿ, ಕೊಲ್ಲೂರು, ರಿಪ್ಪನ್‌ಪೇಟೆ, ಕೋಣಂದೂರು , ಹೊಂಬುಜ, ಕೋಡೂರು, ಸೂಡೂರು, ಮೂಗುಡ್ತಿ, ಗರ್ತಿಕೆರೆ, ಹೆದ್ದಾರಿಪುರ, ಚಿಕ್ಕಜೇನಿ, ಬಸವಾಪುರ, ಬೆಳ್ಳೂರು ಹೀಗೆ ಸುತ್ತಮುತ್ತಲಿನ ಊರಿನ ಪ್ರಯಾಣಿಕರು ಅರಸಾಳು ರೈಲ್ವೆ ನಿಲ್ದಾಣ ಸಮೀಪವಿದ್ದರು ರೈಲಿಗಾಗಿ ಆನಂದಪುರ ಹೋಗುವ ಅನಿವಾರ್ಯತೆ ಇತ್ತು.

ಸಾರ್ವಜನಿಕರ ಹಾಗೂ ಪ್ರಯಾಣಿಕರ ಬಹು ವರ್ಷಗಳಿಂದ ಅರಸಾಳು (ಮಾಲ್ಗುಡಿ) ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡುವಂತೆ ಅನೇಕ ಬಾರಿ ರಿಪ್ಪನ್‌ಪೇಟೆ, ಅರಸಾಳು ಗ್ರಾಮದ ನಾಗರಿಕರು ಹಲವಾರು ಬಾರಿ ಮನವಿ ಸಲ್ಲಿಸಿ ಹೋರಾಟಗಳನ್ನು ಮಾಡಿದ್ದರು.
ಹಾಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಹಾಗೂ ಶಾಸಕ ಮಾಜಿ ಮಂತ್ರಿಗಳಾದ ಆರಗ ಜ್ಞಾನೇಂದ್ರ ಮತ್ತು ಮಾಜಿ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪರವರ ಈ ರೈಲ್ವೆ ನಿಲುಗಡೆಗೆ ಸಾಕಷ್ಟು ಬಾರಿ ಮನವಿಯನ್ನು ಸಲ್ಲಿಸಿದ್ದರು.


ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ರವರು ಅರಸಾಳು ಮಾಲ್ಗುಡಿ ರೈಲ್ವೇ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅವರಿಗೆ ಹಾಗೂ ರೈಲ್ವೆ ಇಲಾಖೆಗೆ ಮಲೆನಾಡಿನ ಜನತೆಯ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ ದಿನಾ ನಾಲ್ಕು ಮುಖ್ಯ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲಲಿದೆ ಎಂದು ತಿಳಿಸಿದರು.

ಸಂಸದರಿಗೆ ಮನವಿ :

ಮುಂಜಾನೆಯ ತಾಳಗುಪ್ಪ – ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಅರಸಾಳು ಗ್ರಾಮದ ಮಾಲ್ಗುಡಿ ರೈಲು ನಿಲ್ದಾಣದಲ್ಲಿ ನಿಲುಗಡೆಗೊಂಡರೆ ತುರ್ತು ಕಾರ್ಯ ನಿಮಿತ್ತ ಬೆಂಗಳೂರಿಗೆ ಸಂಚರಿಸುವ ರೈಲ್ವೆ ಪ್ರಯಾಣಿಕರು ಮಧ್ಯಾಹ್ನದೊಳಗೆ ತಮ್ಮ ಕಾರ್ಯವನ್ನು ಮುಗಿಸಿಕೊಂಡು ತಮ್ಮ ಊರುಗಳಿಗೆ ವಾಪಸ್ ಬರಲು ಅನುಕೂಲವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅರಸಾಳು ರೈಲ್ವೆ ನಿಲ್ದಾಣದಲ್ಲಿ ಮುಂಜಾನೆಯ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಸಂಸದ ಬಿ.ವೈ ರಾಘವೇಂದ್ರರವರಿಗೆ ಮನವಿ ಮಾಡಿದರು.

ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ ಪ್ರಯಾಣಿಕರು ಈ ಅಮೂಲ್ಯ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು. ಹಾಗೆಯೇ ಹೊಸನಗರ ತಾಲೂಕಿನ ಪ್ರತಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಎಕ್ಸ್‌ಪ್ರೆಸ್ ರೈಲು ನಿಲುಗಡೆಯ ಮಾಹಿತಿಯ ಬಗ್ಗೆ ಫ್ಲೆಕ್ಸ್ ಅಳವಡಿಸಬೇಕೆಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಬಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಆಚಾರ್, ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಈ ಮಧುಸೂದನ್, ಗವಟೂರು ಗಣಪತಿ, ಪ್ರಕಾಶ್ ಪಾಲೇಕರ್, ಶಿವಮೊಗ್ಗ ಜಿಲ್ಲಾ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್, ಕಾಂಗ್ರೆಸ್ ಮುಖಂಡರಾದ, ಗವಟೊರು ಸ್ವಾಮಿಗೌಡ, ಜಿ. ಆರ್. ಗೋಪಾಲಕೃಷ್ಣ, ಫ್ಯಾನ್ಸಿ ರಮೇಶ್ ಇನ್ನಿತರರಿದ್ದರು.

Leave A Reply

Your email address will not be published.

error: Content is protected !!