ಗ್ಯಾರಂಟಿ ಅನುಷ್ಟಾನದಿಂದ ಗರ್ಭಿಣಿ, ಬಾಣಂತಿಯರ ಪೌಷ್ಠಿಕಾ ಆಹಾರಕ್ಕೆ ಕತ್ತರಿ !

0 458

ರಿಪ್ಪನ್‌ಪೇಟೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಘೋಷಿಸಲಾದ ಐದು ಗ್ಯಾರಂಟಿ ಯೋಜನೆಯ ಅನುಷ್ಠಾನದಿಂದಾಗಿ ಗರ್ಭಿಣಿ, ಬಾಣಂತಿಯರ ಮತ್ತು ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರಕ್ಕೆ ಕತ್ತರಿ ಬಿದ್ದಿದೆ.

ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಶಕ್ತಿಯೋಜನೆ, ಯುವನಿಧಿ ಈ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಈ ಹಿಂದಿನ ಸರ್ಕಾರಗಳು ಅಂಗನವಾಡಿಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ನೀಡಲಾಗುವ ಪೌಷ್ಟಿಕ ಆಹಾರದಲ್ಲಿ ಕಡಿತಗೊಳಿಸಿರುವುದು ಮಹಿಳೆಯರಲ್ಲಿ ತೀವ್ರ ಅಸಮಧಾನಕ್ಕೆ ಕಾರಣವಾಗಿದೆ. ಇದರೊಂದಿಗೆ ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಪೌಷ್ಟಿಕಾಂಶದ ಚಿಕ್ಕಿ ಮತ್ತು ಮೊಟ್ಟೆಯನ್ನು ಕಡಿತಗೊಳಿಸಿದೆ.

ಗರ್ಭಿಣಿ, ಬಾಣಂತಿಯರಿಗೆ ತಿಂಗಳಿಗೆ 3 ಕೆ.ಜಿ ಅಕ್ಕಿ ಬದಲು ಅದರಲ್ಲೂ ಅರ್ಥ ಕೆ.ಜಿ ಕಡಿತಗೊಳಿಸಿದೆ. ತೊಗರಿಬೇಳೆ, ಕಡಲೆಕಾಯಿ ಬೀಜ 300 ಗ್ರಾಂ, ಸಕ್ಕರೆ 375 ಗ್ರಾಂ, ಹಾಲಿನ ಪೌಡರ್ ಅರ್ಧ ಕೆ.ಜಿ., ಸಾಂಬರ್ ಪುಡಿ 75 ಗ್ರಾಂ, ಸಾಸಿವೆ 5 ಗ್ರಾಂ, ಶೇಂಗಾ ಚಿಕ್ಕಿ 330 ಗ್ರಾಂ ತಿಂಗಳಿಗೆ 25 ಮೊಟ್ಟೆ ವಿತರಿಸಬೇಕು ಆದರೆ ಈಗಿನ ಸರ್ಕಾರ ಹಾಲಿನ ಪೌಡರ್ ಮತ್ತು ಸಕ್ಕರೆ ಹಾಗೂ ಚಿಕ್ಕಿಯನ್ನು 5 ಮೊಟ್ಟೆಯನ್ನು ಕಡಿತಗೊಳಿಸಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಹೆಸರನ್ನು ಹೇಳದೆ ಅಸಹಾಯಕತೆಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡರು.

ಇನ್ನೂ ಅಂಗನವಾಡಿ ಮಕ್ಕಳಿಗೆ ಬೆಳಗ್ಗೆ ಮೊಳಕೆ ಕಾಳು ಹಸಿ ಕಡಲೆ ಹಾಗೂ ಹಾಲಿನ ಪೌಡರ್ ಮೂಲಕ ಹಾಲು ವಿತರಣೆ ಮಾಡಲಾಗುತ್ತಿದ್ದು ಮಧ್ಯಾಹ್ನ ಅನ್ನ ಸಾಂಬರ್, ಚಿಕ್ಕಿ ವಾರದ ಎರಡು ದಿನ ಮೊಟ್ಟೆ ನೀಡಲಾಗುತ್ತಿದ್ದು ಈಗ ಅದನ್ನು ಕಡಿತಗೊಳಿಸಿ ಪೌಷ್ಟಿಕ ಆಹಾರವಾಗಿ “ಕಿಚಡಿ’’ ಮಾಡುವ ಹೊಸ ಆದೇಶವನ್ನು ಪ್ರಕಟಿಸಿ ಈ ತಿಂಗಳಿಂದ ವಿತರಿಸುವಂತೆ ಅಂಗನವಾಡಿ ಕೇಂದ್ರಗಳಿಗೆ ಸೂಚಿಸಿದ್ದಾರೆನ್ನಲಾಗಿದೆ.

ಒಟ್ಟಾರೆಯಾಗಿ ಈ ಹಿಂದಿನ ಸರ್ಕಾರದವರು ನೀಡಲಾಗುತ್ತಿದ್ದ ಪೌಷ್ಟಿಕಾ ಅಹಾರ ಪದ್ದತಿಯನ್ನು ಮುಂದುವರಿಸಿದರೆ ನಮ್ಮ ಗ್ರಾಮೀಣ ಗರ್ಭಿಣಿ, ಬಾಣಂತಿಯರು ಮತ್ತು ಅಂಗನವಾಡಿ ಮಕ್ಕಳು ಸದೃಢ ಆರೋಗ್ಯವಂತರಾಗಲು ಸಾಧ್ಯವಾಗುವುದು. ಆದರೆ, ಈಗಿನ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನದ ಹೆಸರಿನಲ್ಲಿ ಆರೋಗ್ಯವಂತ ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರು ಅನಾರೋಗ್ಯ ಪೀಡಿತರಾಗುವ ಮೂಲಕ ರಕ್ತಹೀನತೆಗೆ ಒಳಗಾಗುವ ಕಾಲ ದೂರವಿಲ್ಲ ಎನ್ನುವಂತಾಗಿದೆ.

ಕಳೆದ ಎರಡು ತಿಂಗಳಿಂದ ಚಿಕ್ಕಿ ಮತ್ತು ಇನ್ನಿತರ ಆಹಾರ ಧಾನ್ಯಗಳು ಸರಬರಾಜು ಆಗಿಲ್ಲ ಎಂದು ತಾಲ್ಲೂಕಿನ ಕೆಲವು ಅಂಗನವಾಡಿ ಕೇಂದ್ರ ವ್ಯಾಪ್ತಿಯ ಗರ್ಭಿಣಿ, ಬಾಣಂತಿಯರು ತಮ್ಮ ಅಂತರಾಳದ ನೋವನ್ನು ಮಾಧ್ಯಮದೊಂದಿಗೆ “ಒಂದು ಕಡೆ ಕೊಟ್ಟರೂ ಇನ್ನೊಂದು ಕಡೆಯಲ್ಲಿ ಕಿತ್ತುಕೊಂಡರು’’ ಎಂಬ ಮಾತಿನಂತಾಗಿದೆ ಎಂದು ಹೇಳಿದರು.

Leave A Reply

Your email address will not be published.

error: Content is protected !!