Mcgann Hospital Shivamogga | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ನವಜಾತ ಶಿಶುವನ್ನು ಕಚ್ಚಿಕೊಂಡು ಓಡಾಡಿದ ನಾಯಿ !

0 23

ಶಿವಮೊಗ್ಗ : ಇಲ್ಲಿನ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮಾರ್ಚ್‌ 31ರ ಬೆಳಗಿನಜಾವ ನಾಯಿಯೊಂದು ನವಜಾತ ಹೆಣ್ಣು ಶಿಶು ಕಚ್ಚಿಕೊಂಡು ಓಡಾಡಿದೆ. ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರು, ಭದ್ರತಾ ಸಿಬ್ಬಂದಿ ನಾಯಿ ಓಡಿಸಿ, ಶಿಶುವನ್ನು ಪರೀಕ್ಷಿಸಿದಾಗ ಅದು ಮೃತಪಟ್ಟಿರುವುದು ಗೊತ್ತಾಗಿದೆ.

ಅಂದು ಆಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ನಾಯಿ ಶಿಶು ಕಚ್ಚಿಕೊಂಡು ಓಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿ ನಾಯಿ ಓಡಿಸಿ, ಶಿಶುವನ್ನು ಹೆರಿಗೆ ವಾರ್ಡ್‌ಗೆ ಕೊಂಡೊಯ್ದಿದ್ದಾರೆ. ಅಲ್ಲಿ ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವುದು ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಶಿಶು ನಮ್ಮ ಆಸ್ಪತ್ರೆಯದ್ದಲ್ಲ:

ಬೇರೆ ಯಾವುದೋ ಆಸ್ಪತ್ರೆಯಲ್ಲಿ ಸಾವಿಗೀಡಾದ ಶಿಶುವನ್ನು ತಂದು ನಮ್ಮ ಆಸ್ಪತ್ರೆಯ ಹೆರಿಗೆ ವಾರ್ಡ್ ಹಿಂಭಾಗ ಪ್ಯಾಕ್‌ ಮಾಡಿ ಎಸೆದು ಹೋಗಿದ್ದಾರೆ. ಅದನ್ನು ನಾಯಿ ಕಚ್ಚಿಕೊಂಡು ಬಂದಿದೆ ಎಂದು ಮೆಗ್ಗಾನ್‌ ಆಸ್ಪತ್ರೆಯ ಅಧೀಕ್ಷಕ ಡಾ.ಎಸ್‌.ಶ್ರೀಧರ್ ಹೇಳಿದ್ದಾರೆ.

ಬಹುಶಃ ಖಾಸಗಿ ನರ್ಸಿಂಗ್‌ ಹೋಂನವರು ಎಸೆದು ಹೋಗಿರಬಹುದು. ಹೀಗಾಗಿ ಶಿಶುವಿನ ತಂದೆ-ತಾಯಿ ಯಾರು ಎಂಬುದೂ ಗೊತ್ತಾಗಿಲ್ಲ. ಆ ದಿನ ನಮ್ಮ ಹೆರಿಗೆ ವಾರ್ಡ್‌ನಲ್ಲಿ ಯಾವುದೇ ಮಗು ಸಾವಿಗೀಡಾಗಿಲ್ಲ. ಸತ್ಯಾಸತ್ಯತೆಯನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದು, ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!