ವೇದ ಬ್ರಹ್ಮ ವಿದ್ವಾನ್ ಅ.ಪ. ರಾಮಭಟ್ಟ್ ನಿಧನ

ಶಿವಮೊಗ್ಗ : ವೇದ ಬ್ರಹ್ಮ ಶಿವಮೊಗ್ಗ ನಗರದ ಆಧ್ಯಾತ್ಮಿಕ ಕ್ಷೇತ್ರದ ಕೊಂಡಿಯಾಗಿದ್ದ ವಿದ್ವಾನ್ ಅ.ಪ.ರಾಮಭಟ್ಟರು (73) ನಿನ್ನೆ ರಾತ್ರಿ ವಿಧಿವಶರಾದರು.


ಕೆಲವು ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು, ಅನಾರೋಗ್ಯದ ನಡುವೆಯೂ ನಿರಂತರ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದರು. ಶಿವಮೊಗ್ಗದ ಹೌಸಿಂಗ್ ಸೊಸೈಟಿಯಿಂದ ರವೀಂದ್ರ ನಗರದಲ್ಲಿ ನಿರ್ಮಾಣಗೊಂಡ ಪ್ರಸನ್ನ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕಳೆದ 35 ವರ್ಷಗಳಿಂದ ವಿವಿಧ ಸಾಂಸ್ಕೃ ತಿಕ, ಧಾರ್ಮಿಕ, ಕಾರ್ಯಕ್ರಮಗಳನ್ನು ನಡೆಸುತ್ತಾ ಭಕ್ತರಿಗೆ ಧಾರ್ಮಿಕ, ಆಧ್ಯಾತ್ಮಿಕ ಸನ್ಮಾರ್ಗದ ಹಾದಿ ತೋರಿದ ದಿವ್ಯ ಚೇತನವಾಗಿದ್ದರು. ನಗರದ ಅನೇಕ ದೇವಾಲಯದ ಅರ್ಚಕರು ಅವರ ಗರಡಿಯಲ್ಲೇ ಪಳಗಿದ್ದು, ಅನೇಕ ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿದ್ದ ಆ.ಪ.ರಾಮಭಟ್ಟರು ಹಲವಾರು ಧಾರ್ಮಿಕ ಗುರುಗಳು ಮತ್ತು ದಿಗ್ಗಜರನ್ನು ರವೀಂದ್ರ ನಗರ ಗಣಪತಿ ದೇವಸ್ಥಾನಕ್ಕೆ ಕರೆಯಿಸಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.ಶಿವಮೊಗ್ಗ ಭಜನಾ ಪರಿಷತ್ ಅಧ್ಯಕ್ಷರೂ ಸಹ ಆಗಿದ್ದರು.

ಧರ್ಮಶಾಸ್ತ್ರ, ವೇದಾಂಗ, ಪರಂಗತರಾಗಿದ್ದ ಅವರು ಸದಾ ಹಸನ್ಮುಖಿಯಾಗಿ ಅತ್ಯಂತ ಸರಳ ಜೀವನ ನಡೆಸುತ್ತ ಯಾವುದೇ ಆಸೆಗೆ ಒಳಗಾಗದೆ ತಮ್ಮ ಇಡೀ ಜೀವನವನ್ನು ಧರ್ಮ ಪ್ರಚಾರ ಹಾಗೂ ಹೋಮ, ಹವನ, ಜಪ- ತಪಗಳನ್ನು ಲೋಕಕಲ್ಯಾಣಾರ್ಥವಾಗಿ ನಡೆಸುತ್ತ ಮಾದರಿಯಾಗಿದ್ದರು.
2022 ರಲ್ಲಿ ಶ್ರೀ ಶನೈಶ್ವರ ಟ್ರಸ್ಟ್ ವತಿಯಿಂದ ಹರಿಹರ ಪೀಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ಸನ್ನಿಧಾನದಲ್ಲಿ‌ ಶ್ರೀ ವೇದ ನಾರಾಯಣಾನುಗ್ರಹ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಹಲವಾರು ಸಂಘ ಸಂಸ್ಥೆಗಳು, ದೇವಾಲಯ ಸಮಿತಿಗಳು ಅ.ಪ.ರಾಮಭಟ್ಟರಿಗೆ ಅನೇಕ ಪ್ರಶಸ್ತಿ ನೀಡಿ ಗೌರವಿಸಿತ್ತು.


ಮೂಲತಃ ತೀರ್ಥಹಳ್ಳಿಯ ಅಂಬುತೀರ್ಥದವರಾದ ಅವರು, ಇತ್ತೀಚೆಗೆ ಶರಾವತಿ ನದಿಯ ಉಗಮ ಸ್ಥಾನವಾದ ಅಂಬುತೀರ್ಥದ ಜೀರ್ಣೋದ್ಧಾರಕ್ಕೆ ಶ್ರಮ ಪಟ್ಟಿದ್ದರು. ಪತ್ನಿ
ವಿಜಯಲಕ್ಷ್ಮಿ, ಪುತ್ರ ಶಂಕರ್‌ಭಟ್, ಸೊಸೆ, ಮೊಮ್ಮಕ್ಕಳನ್ನು ಅವರು ಅಗಲಿದ್ದು, ಶಿವಮೊಗ್ಗ ನಗರದ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.

ಅವರ ನಿಧನಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿ, ಶಿವಮೊಗ್ಗ ಜಿಲ್ಲಾ ವೈದಿಕ ಪರಿಷತ್, ಭಜನಾ ಪರಿಷತ್, ಜಿಲ್ಲಾ ಬ್ರಾಹ್ಮಣ ಮಹಾಸಭಾ, ಆರ್ಟ್ ಆಫ್ ಲಿವಿಂಗ್ ಶಿವಮೊಗ್ಗ ಸೇರಿದಂತೆ ಅನೇಕ ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!