ಎರಡು ಎಕ್ಸ್‌ಪ್ರೆಸ್ ರೈಲುಗಳು ಆ.24 ರಿಂದ ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆ ; ಸಂಸದ ಬಿ.ವೈ. ರಾಘವೇಂದ್ರ

0 107

ಶಿವಮೊಗ್ಗ : ಕುಂಸಿ ಮತ್ತು ಅರಸಾಳು ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ. ಆ.24ರಿಂದ ರೈಲುಗಳು ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ ತಿಂಗಳಿನಲ್ಲಿ ರೈಲ್ವೆ ಜನರಲ್ ಮ್ಯಾನೇಜರ್ ರವರೊಂದಿಗೆ ಹುಬ್ಬಳ್ಳಿಯಲ್ಲಿ ನಡೆಸಲಾದ ಸಭೆಯಲ್ಲಿ ಹಾಗೂ ಇತ್ತೀಚೆಗೆ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಅಶ್ವೀನಿ ವೈಷ್ಣವ್ ರವರನ್ನು ದೆಹಲಿಯಲ್ಲಿ ಭೇಟಿ ಮಾಡಿ ವಿವಿಧ ರೈಲ್ವೆ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದ ಸಮಯದಲ್ಲಿಯೇ ಹಾರನಹಳ್ಳಿ, ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮಾಡುವಂತೆ ವಿನಂತಿ ಮಾಡಲಾಗಿತ್ತು. ಈ ಸಂಬಂಧ ನೈರುತ್ಯ ರೈಲ್ವೆ ವಲಯದಿಂದ ರೈಲ್ವೆ ಬೋರ್ಡ್ ಗೆ ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿರುವುದನ್ನು ಸಚಿವರ ಗಮನಕ್ಕೆ ತಂದು ಈ ಬಗ್ಗೆ ನಿಲುಗಡೆ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಸ್ತುತ ಇದೀಗ ನೈರುತ್ಯ ರೈಲ್ವೆ ವಲಯ ಈ ಕೆಳಕಂಡ ಎರಡು ಎಕ್ಸ್‌ಪ್ರೆಸ್ ರೈಲುಗಳಿಗೆ ಕುಂಸಿ ಮತ್ತು ಅರಸಾಳುವಿನಲ್ಲಿ ನಿಲುಗಡೆಯನ್ನು ನೀಡಲು ತಾತ್ವಿಕವಾಗಿ ಒಪ್ಪಿಗೆಯನ್ನು ನೀಡಿದ್ದು, ಇದೇ ಗುರುವಾರ 24 ರಿಂದ ರೈಲುಗಳಿಗೆ ನಿಲುಗಡೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಯಾವ್ಯಾವ ರೈಲುಗಳ ನಿಲುಗಡೆ ?

16205 : ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ನಿಲ್ದಾಣದಲ್ಲಿ ಸಂಜೆ 04.03ಕ್ಕೆ ಮತ್ತು ಕುಂಸಿ ರೈಲು ನಿಲ್ದಾಣದಲ್ಲಿ ಸಂಜೆ 04.21ಕ್ಕೆ ನಿಲುಗಡೆ ಮಾಡಲಾಗುವುದು.
16206 : ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಕುಂಸಿ ನಿಲ್ದಾಣದಲ್ಲಿ ಬೆಳಿಗ್ಗೆ 11.31ಕ್ಕೆ ಮತ್ತು ಅರಸಾಳು ರೈಲು ನಿಲ್ದಾಣದಲ್ಲಿ 11.48ಕ್ಕೆ ನಿಲುಗಡೆ ಮಾಡಲಾಗುವುದು.

16228 : ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ರಾತ್ರಿ 10.05 ಕ್ಕೆ ನಿಲುಗಡೆ ಮಾಡಲಾಗುವುದು.
16227 : ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ರೈಲಿಗೆ ಅರಸಾಳು ರೈಲು ನಿಲ್ದಾಣದಲ್ಲಿ ಬೆಳಿಗ್ಗೆ 5.45 ಕ್ಕೆ ನಿಲುಗಡೆ ಮಾಡಲಾಗುವುದು.
ಸೂಚನೆ : (ಪರಿಪೂರ್ಣ ವೇಳಾಪಟ್ಟಿಯನ್ನು ರೈಲ್ವೆ ಇಲಾಖೆಯು ಸಧ್ಯದಲ್ಲಿಯೇ ಬಿಡುಗಡೆ ಮಾಡುತ್ತದೆ.)

ಹಾರನಹಳ್ಳಿಯಲ್ಲಿ ರೈಲು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿರುವ ನೈರುತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ರವರು ಹಾರನಹಳ್ಳಿ ರೈಲ್ವೆ ನಿಲ್ದಾಣವು ಕುಂಸಿ ರೈಲ್ವೆ ನಿಲ್ದಾಣಕ್ಕೆ ಕೇವಲ 5-6 ಕಿ.ಮೀ. ಒಳಗಡೆ ಇರುವುದರಿಂದ, ತಾಂತ್ರಿಕವಾಗಿ ರೈಲು ನಿಲುಗಡೆ ಕಷ್ಟಸಾಧ್ಯವೆಂದು ತಿಳಿಸಿದ್ದಾರೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಹಾರನಹಳ್ಳಿಯಲ್ಲಿಯೂ ಸಹ ರೈಲು ನಿಲುಗಡೆಗೆ ಒತ್ತಾಯ ಮಾಡಲಾಗುವುದು. ಪ್ರಸ್ತುತ ನಮ್ಮ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ರವರಿಗೆ, ರೈಲ್ವೆ ಬೋರ್ಡ್ ನವರಿಗೆ, ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ರವರಿಗೆ, ರೈಲ್ವೆ ಮೈಸೂರು ಡಿವಿಜನಲ್ ಮ್ಯಾನೇಜರ್ ಶಿಲ್ಪಿ ಅಗರವಾಲ್ ರವರಿಗೆ ಶಿವಮೊಗ್ಗ ಕ್ಷೇತ್ರದ ಪರವಾಗಿ ಧನ್ಯವಾದಗಳನ್ನು ಸಂಸದ ರಾಘವೇಂದ್ರ ತಿಳಿಸಿದ್ದಾರೆ.

ಪ್ರಾಯೋಗಿಕವಾಗಿ ನೀಡಲಾಗುತ್ತಿರುವ ಈ ನಿಲುಗಡೆಯ ಕೊಡುಗೆಯನ್ನು ಪ್ರಯಾಣಿಕರು ಸಮರ್ಥವಾಗಿ ಬಳಕೆ ಮಾಡಿಕೊಂಡಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಈ ನಿಲುಗಡೆಯನ್ನು ಮುಂದುವರೆಸುವ ಸಾಧ್ಯತೆಗಳಿರುವುದರಿಂದ, ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಸಂಸದರು ಕೋರಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!