ಕೆರೆ ಅಭಿವೃದ್ಧಿಗೆ 16.50 ಕೋಟಿ ರೂ. ಅನುದಾನ ಬಿಡುಗಡೆ, ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ

0 366

ಹೊಸನಗರ : ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಬರುವ ಪ್ರತಿ ಕೆರೆಗಳ ಅಭಿವೃದ್ಧಿಗಾಗಿ ತಲಾ 50 ಲಕ್ಷ ರೂ.ಗಳಂತೆ ಒಟ್ಟು 16.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮರಿಕೊಪ್ಪದಲ್ಲಿ ಬಟ್ಟೆಮಲ್ಲಪ್ಪದ ಸಾರಾ ಸಂಸ್ಥೆ ಹಾಗೂ ಸ್ಥಳೀಯ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಪುನರ್‌ನಿರ್ಮಾಣಗೊಳಿಸಿದ ಕೆರೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ನಡೆಯುವ ಕೆರೆ ಅಭಿವೃದ್ಧಿ ಕೆಲಸಗಳು ಇಷ್ಟರಲ್ಲಿಯೇ ಕೆಲಸ ಆರಂಭವಾಗಲಿದೆ. ರೈತರು ಸ್ವಾವಲಂಬಿಗಳಾಗಿ ಬಾಳಬೇಕು. ಕೇಂದ್ರ ಸರ್ಕಾರ ಕಾಲುಸಂಕ ನಿರ್ಮಾಣ, ತೆರೆದಬಾವಿ ನಿರ್ಮಾಣದಂತಹ ಕರ‍್ಯಗಳಿಗೆ ನರೇಗಾ ಯೋಜನೆಯಡಿ ಅವಕಾಶ ಇಲ್ಲದಂತೆ ನಿಯಮ ರೂಪಿಸಿರುವುದು ಸರಿಯಲ್ಲ ಎಂದರು.

ಸರ್ಕಾರ ಹಲವು ಕಾಮಗಾರಿಗಳಿಗೆ ಅನುದಾನ ಮೀಸಲಿಟ್ಟು, ಗುತ್ತಿಗೆದಾರರಿಂದ ಅನುಷ್ಠಾನಗೊಳಿಸಿದ ಕಾಮಗಾರಿಗಳಿಗಿಂತಲೂ, ಸ್ಥಳೀಯ ಜನತೆ, ಸಂಘ-ಸಂಸ್ಥೆಗಳು ಕೈಗೊಂಡ ಕಾರ್ಯಗಳು ಹೆಚ್ಚು ಗುಣಮಟ್ಟದಿಂದ ಕೂಡಿರುತ್ತಿವೆ. ಅಂತರ್ಜಲ ಕುಸಿತದ ಕಾಲಘಟ್ಟದಲ್ಲಿ ಕೆರೆ ಅಭಿವೃದ್ಧಿಯಂತಹ ಕಾರ್ಯಕ್ಕೆ ಗ್ರಾಮಸ್ಥರು ಮುಂದಾಗಿರುವುದು ಸಂತಸದ ವಿಷಯ ಎಂದರು.

ಮಹಾನಗರಗಳಲ್ಲಿ ಕಾರ್ಪೋರೇಟ್ ಕಂಪನಿಗಳು ಸಾವಿರಾರು ಕೋಟಿ ರೂ. ವಹಿವಾಟು ನಡೆಸುತ್ತವೆ. ಸಾಮಾಜಿಕ ಕಾರ್ಯಗಳಿಗಾಗಿ ಒಂದಿಷ್ಟು ಅನುದಾನವನ್ನು ಸಂಸ್ಥೆಗಳು ಮೀಸಲಿಡಬೇಕು. ಕೆರೆ ನಿರ್ಮಾಣ, ಪರಿಸರ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ತೊಡಗಿಕೊಂಡಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ ಎಂದರು.

ಕೆರೆ ನಿರ್ಮಾಣಕ್ಕೆ ತಗುಲುವ ಖರ್ಚಿನ ಬಹುಪಾಲನ್ನು ಗ್ರಾಮಸ್ಥರೇ ಭರಿಸಿರುವುದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಶ್ಲಾಘನೆ ವ್ಯಕ್ತಪಡಿಸಿದರು.

ಕೆರೆ ನಿರ್ಮಾಣ ಸಮಿತಿ ಪದಾಕಾರಿಗಳನ್ನು ಗೌರವಿಸಿದರು. ಸ್ಥಳದಲ್ಲಿಯೇ ವೈಯಕ್ತಿಕವಾಗಿ ರೂ.10 ಸಾವಿರ ರೂ. ಕೆರೆ ನಿರ್ಮಾಣ ಸಮಿತಿಗೆ ದೇಣಿಗೆ ನೀಡಿ ಗಮನ ಸೆಳೆದರು. ಮುಂದಿನ ಕಾರ್ಯಗಳಿಗಾಗಿ 2 ಲಕ್ಷ ರೂ. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಾರಾ ಸಂಸ್ಥೆಯ ಧನುಷ್, ಗ್ರಾಪಂ ಅಧ್ಯಕ್ಷೆ ದೀಪಿಕಾ ಕೃಷ್ಣ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಶಂಕರಶೆಟ್ಟಿ, ಸದಸ್ಯರಾದ ಜಯಮ್ಮ, ಪ್ರಕಾಶ್, ಕೆರೆ ನಿರ್ಮಾಣ ಸಮಿತಿ ಅಧ್ಯಕ್ಷ ಗೋವಿಂದಪ್ಪ, ತಹಸೀಲ್ದಾರ್ ರಶ್ಮಿ ಹಾಲೇಶ್, ತಾಪಂ ಇಓ ನರೇಂದ್ರಕುಮಾರ್ ಮತ್ತಿತರರು ಇದ್ದರು. ಗ್ರಾಪಂ ಸದಸ್ಯ ಇಂದ್ರೇಶ್ ಕಾರ್ಯಕ್ರಮ ನಿರ್ವಹಿಸಿದರು.

Leave A Reply

Your email address will not be published.

error: Content is protected !!