ತಾಯಂದಿರ ಎದೆ ಹಾಲಿನ ಬ್ಯಾಂಕ್ ಉದ್ಘಾಟನೆ | ಎದೆ ಹಾಲು ಕೊಡುವುದರಿಂದ 8 ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣ ಒಂದು ವರ್ಷದಲ್ಲಿ ಉಳಿಸಬಹುದು ; ಡಾ. ಸರ್ಜಿ

0 298

ಶಿವಮೊಗ್ಗ : ತಾಯಿಯ ಎದೆಹಾಲನ್ನು ಅಮೃತಕ್ಕೆ ಹೋಲಿಸುತ್ತೇವೆ. ಎದೆಹಾಲು ಕೊಡುವುದರಿಂದ 8 ಲಕ್ಷಕ್ಕೂ ಹೆಚ್ಚು ಮಕ್ಕಳ ಪ್ರಾಣವನ್ನು ಒಂದು ವರ್ಷದಲ್ಲಿ ಉಳಿಸಬಹುದು ಎಂದು ಮಕ್ಕಳ ತಜ್ಞ ಡಾ. ಸರ್ಜಿ ಪೌಂಡೇಶನ್ ಅಧ್ಯಕ್ಷರಾದ ಡಾ. ಧನಂಜಯ್ ಸರ್ಜಿ ಹೇಳಿದ್ದಾರೆ.


ಅವರು ಇಂದು ಆರ್.ಎಂ.ಆರ್. ರಸ್ತೆಯಲ್ಲಿರುವ ತಾಯಿ-ಮಗು ಸರ್ಜಿ ಆಸ್ಪತ್ರೆಯಲ್ಲಿ
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹದ ಸಹಯೋಗದೊಂದಿಗೆ ಇಂದು ಅಮೃತ ಬಿಂದು ಹೆಸರಿನ ತಾಯಂದಿರ ಎದೆಹಾಲಿನ ಬ್ಯಾಂಕ್‌ನ ಉದ್ಘಾಟನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾದುದು. ಅದು ಮಗುವಿನ ಜೀವವನ್ನು ಉಳಿಸುತ್ತದೆ. ವಿಶೇಷವಾಗಿ ಅವಧಿಗೆ ಮುಂಚೆ ಹುಟ್ಟಿದ ಮಗುವಿಗೆ ಮತ್ತು ತೂಕ ಕಡಿಮೆ ಇರುವ ಮಗುವಿಗೆ ಹಾಲಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ ಮಗುವಿಗೆ ತಾಯಿಯ ಹಾಲು ಸಿಗುವುದಿಲ್ಲ. ಇಂತಹ ಸಂದರ್ಭದಲ್ಲಿ ಮಗುವಿನ ಬೆಳಿವಣಿಗೆ ಕುಂಠಿತವಾಗುತ್ತದೆ. ನಾನಾ ರೋಗಗಳು ಬಾಧಿಸುತ್ತದೆ ಬಾಟಲಿ ಹಾಲು ಸೇವಿಸುವ ಹೆಚ್ಚಿನ ಮಕ್ಕಳಲ್ಲಿ ವಾಂತಿ ಬೇಧಿ, ಅತಿಸಾರ, ಹೃದಯದ ಕಾಯಿಲೆ, ಮೆದುಳು ಮತ್ತು ಕಣ್ಣಿನ ಕಾಯಿಲೆ, ಚರ್ಮದ ಕಾಯಿಲೆ ಬರುವ ಸಾಧ್ಯತೆ ಇದೆ. ಎಲ್ಲ ಕಾಯಿಲೆಗಳಿಗೆ ತಾಯಿ ಎದೆಹಾಲು ಅತ್ಯಂತ ಪರಿಣಾಮಕಾರಿಯಾಗಿ ಅಮೃತ ರೂಪದಲ್ಲಿ ಪರಿಣಾಮ ಬೀರುತ್ತದೆ. ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದರು.


ಒಂದು ಅಂಕಿ ಅಂಶದ ಪ್ರಕಾರ ಶೇ.46 ರಷ್ಟು ನವಜಾತ ಶಿಶುಗಳಿಗೆ ಸಮರ್ಪಕವಾಗಿ ಸ್ತನ್ಯ ಪಾನವಾಗುತ್ತಿಲ್ಲ ಎಂದು ತಿಳಿದು ಬರುತ್ತಿದೆ. ಇದರ ಪರಿಣಾಮ ಮಕ್ಕಳಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಗುತ್ತಿವೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಅಥವಾ ಮೆದುಳಿನ ಬೆಳವಣಿಗೆ ಆಗಿರಬಹುದು, ಇವೆಲ್ಲದರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಪ್ರಾಮುಖ್ಯತೆ ಅರಿತೇ ಎಲ್ಲ ನವ ಜಾತ ಶಿಶುಗಳಿಗೂ ತಾಯಂದಿರ ಎದೆಹಾಲು ದೊರೆಯಬೇಕೆಂಬ ಸದುದ್ದೇಶದೊಂದಿಗೆ ಎದೆ ಹಾಲಿನ ಬ್ಯಾಂಕ್‌ನ್ನು ಪ್ರಪಂಚಾದ್ಯಂತ ಸ್ಥಾಪನೆ ಮಾಡಲಾಗಿದೆ ಇದೇ ಮೊದಲ ಬಾರಿಗೆ ಮಧ್ಯ ಕರ್ನಾಟಕದಲ್ಲಿ ಅಮೃತ ಬಿಂದು ಶಿವಮೊಗ್ಗ ಸರ್ಜಿ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಿದೆ . ಎದೆಹಾಲಿನಲ್ಲಿ ಅನೇಕ ಉತ್ತಮ ಅಂಶಗಳಿವೆ. ಇನ್ನು ಇದರ ಬಗ್ಗೆ ಸಂಶೋಧನೆ ನಡೆಯುತ್ತ ಇದೆ. ಎಲ್ಲವನ್ನು ನೀಗಿಸುವ ಶಕ್ತಿ ಎದೆಹಾಲಿನಲ್ಲಿ ಇದೆ ಎಂದರು.


ಆಸಕ್ತಿಇರುವ ಹೆಚ್ಚುವರಿ ಹಾಲು ಲಭ್ಯವಿರುವ ತಾಯಂದಿರು ಸ್ವಯಂ ಪ್ರೇರಿತರಾಗಿ ಎದೆ ಹಾಲನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಈಗಾಗಲೇ 5ಮಕ್ಕಳಿಗೆ ನಮ್ಮ ಆಸ್ಪತ್ರೆಯಲ್ಲಿ ಎದೆಹಾಲು ನೀಡಿ, ಪ್ರಾಣಾಪಾಯದಿಂದ ರಕ್ಷಿಸಿದ್ದೇವೆ. ಅದನ್ನು ಶೇಖರಿಸಿ ಪಾಶ್ಚ್ಯತೀಕರಿಸಿ ಲ್ಯಾಭ್‌ನಲ್ಲಿ ಪರೀಕ್ಷೆ ಮಾಡಿದ ನಂತರ ಸೂಕ್ತ ಉಷ್ಣಾಂಶದಲ್ಲಿ ಅದನ್ನು ಶೀತಲಿಕರಿಸಿ ಪರೀಕ್ಷೆ ಮಾಡಿದ ಬಳಿಕ ಮಗುವಿಗೆ ಯೋಗ್ಯ ಎಂದು ಕಂಡುಬಂದಲ್ಲಿ ಅದಕ್ಕೆ ಗ್ರೀನ್‌ಲೇಬಲ್ ಹಚ್ಚಿ ಬಾಟಲಿಯಲ್ಲಿ ಸಂಗ್ರಹಿಸಲಾಗುವುದು. ಒಂದು ಎಂಎಲ್ ಹಾಲಿಗೆ 4 ರಿಂದ 6 ರೂ.ಗಳ ಖರ್ಚು ಬರುತ್ತಿದ್ದು, ಸಂಗ್ರಹಿಸಿದ ಹಾಲನ್ನು ಶೇ.30ರಷ್ಟು ಸರ್ಕಾರಿ ಆಸ್ಪತ್ರೆಗೆ ಬಡ ಮಕ್ಕಳಿಗೆ ನೀಡಲಾಗುವುದು ಎಂದರು.


ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕೋಡಿಮಠದ ಶ್ರೀ ಡಾ. ಶಿವಾನಂದ ರಾಜೇಂದ್ರ ಸ್ವಾಮೀಜಿಗಳು ಮಾತನಾಡಿ, ಪುರಾತನ ಕಾಲದಿಂದಲೂ ತಾಯಿ ಎದೆಹಾಲೇ ಶ್ರೇಷ್ಟ ಎಂಬ ಪರಂಪರೆಯನ್ನು ಇಡೀ ಜಗತ್ತೆ ಹೊಂದಿದೆ. ಎದೆಹಾಲಿನಿಂದ ಬರುವ ಶಕ್ತಿ ಅಪಾರವಾದದ್ದು ಮತ್ತು ಅದು ಎಲ್ಲಿಯೂ ಸಿಗುವುದಿಲ್ಲ ಎಂದರು.
ಇಂದಿನ ಆಧುನಿಕ ಸೌಲಭ್ಯಗಳಿಗೆ ಮಾರುಹೋದ ನಮ್ಮ ಹೆಣ್ಣು ಮಕ್ಕಳು, ಮಕ್ಕಳಿಗೆ ಹಾಲುಣ್ಣಿಸುವಲ್ಲಿ ಯೋಚಿಸುತ್ತಿದ್ದಾರೆ. ಜೊತೆಗೆ ವಿವಿಧ ಕಾರಣಗಳಿಂದ ಮಗುವಿಗೆ ಎದೆಹಾಲು ಸಿಗದೇ ಹೋಗುತ್ತಿದೆ. ಇದರಿಂದ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಸರ್ಜಿ ಆಸ್ಪತ್ರೆಯವರು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಯಶಸ್ವಿಯಾಗಲಿ, ಮಕ್ಕಳ ಆರೋಗ್ಯ ಸುಧಾರಿಸಲಿ ಎಂದರು.


ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ,  ಬೆಂಗಳೂರು ದಯಾನಂದ ಸಾಗರ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಆಶಾ ಬೆನಕಪ್ಪ, ಶಿವಮೊಗ್ಗದ ಖ್ಯಾತ ವೈದ್ಯ ಡಾ.ಪಿ.ನಾರಾಯಣ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಜೀ, ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೋಜಿ, ರೋಟರಿ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ರೊ.ಎಚ್.ಪಿ. ಶಿವರಾಜ್, ರೊ.ಜೆ.ಪಿ.ಚಂದ್ರು, ಸರ್ಜಿ ಆಸ್ಪತ್ರೆ ಮೆಡಿಕಲ್ ಸೂಪರಿಂಟ್‌ಂಡೆಂಟ್ ಡಾ. ಪ್ರಶಾಂತ್ ಎಸ್.ವಿ. ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!