ನಾವು ಹಿಂದೂಗಳೇ, ನನ್ನ ಎದೆಯಲ್ಲೂ ಶ್ರೀರಾಮ ಸಿದ್ದರಾಮ
ಇಬ್ಬರೂ ಕಾಣ್ತಾರೆ ; ಶಾಸಕ ಪ್ರದೀಪ್ ಈಶ್ವರ್

0 437

ಶಿವಮೊಗ್ಗ : ನಾವು ಹಿಂದೂಗಳೇ ನಮ್ಮ ಎದೆಯಲ್ಲೂ ಶ್ರೀರಾಮನಿದ್ದಾನೆ ಜೊತೆಗೆ ಅಲ್ಲಮನೂ ಇದ್ದಾನೆ, ಸಿದ್ದರಾಮಯ್ಯನೂ ಇದ್ದಾನೆ, ಅಂಬೇಡ್ಕರ್ ಕೂಡ ಇದ್ದಾರೆ ಎಂದು ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಅವರು ಇಂದು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಯೋಧ್ಯೆಯ ಶ್ರೀರಾಮನ ಪ್ರತಿಷ್ಠಾಪನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹೋಗುತ್ತಾರೆ, ನಾನು ಹೋಗುತ್ತೇನೆ. ನಾವು ಕೂಡ ಹಿಂದೂಗಳೇ ಆದರೆ, ಈತರ ಎಲ್ಲಾ ಧರ್ಮಗಳನ್ನುನಾವು ಪ್ರೀತಿಸುತ್ತೇವೆ. ನಾವೆಲ್ಲರೂ ಅಣ್ಣ ತಮ್ಮಂದಿರು ಆದರೆ ರಾಜಕಾರಣಿಗಳಿಗೆ ಚುನಾವಣೆಗೆ ಬಂದಾಗ ಮಾತ್ರ ಶ್ರೀರಾಮ ಬರುತ್ತಾನೆ. ಯುವ ಜನಾಂಗವನ್ನೇ ಈ ರಾಜಕಾರಣಕ್ಕೆ ಬಿಡುತ್ತಾರೆ. ಆದ್ದರಿಂದ ಯುವಕರು ರಾಜಕಾರಣಿಗಳ ಹಿಂದೆ ಬೀಳಬಾರದು. ಹೆಚ್ಚೆಂದರೆ ರಾಜಕಾರಣಿಗಳಿಗೆ ಓಟು ಹಾಕಿ, ನಾಲ್ಕು ಓಟು ಹಾಕಿಸಿ ಆದರೆ ಅವರ ಹಿಂದೆ ಬೀಳಬೇಡಿ.‌ ಕೋಮುಗಲಭೆಗಳಲ್ಲಿ ಭಾಗವಹಿಸಬೇಡಿ. ಕೇಸು ಹಾಕಿಸಿಕೊಂಡರೆ ತುಂಬ ಕಷ್ಟವಾಗುತ್ತದೆ. ಇಡೀ ಜೀವನವೇ ಹಾಳಾಗುತ್ತದೆ. ನಿಮಗೆ ಉದ್ಯೋಗ ಮುಖ್ಯ ಅದಕ್ಕಾಗಿ ಓದಿ ಸಂಪಾದನೆ ಮಾಡಿ, ಜೀವನ ಕಟ್ಟಿಕೊಳ್ಳಿ ಎಂದರು.

ಅನಂತಕುಮಾರ್ ಹೆಗಡೆಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಂಸ್ಕೃತಿಯ ಬಗ್ಗೆ ಮಾತನಾಡಲಿ, ನಾನು ಚರ್ಚೆಗೆ ಸಿದ್ದ ಆದರೆ ಅದನ್ನು ಬಿಟ್ಟು ಮುಖ್ಯಮಂತ್ರಿ ಗಳಿಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ನಾವು ಯಾರೇ ಆಗಲಿ ಯಡಿಯೂರಪ್ಪನವರಿಗೆ ಆಗಲಿ ಕುಮಾರಸ್ವಾಮಿಯವರಿಗೆ ಆಗಲಿ, ಪ್ರಧಾನಿ ಮೋದಿಜಿಗೆ ಆಗಲಿ ಗೌರವವನ್ನು ಕೊಡುತ್ತೇವೆ. ಈ ಗೌರವ ಕೊಡುವುದನ್ನು ರಾಜಕಾರಣಿಗಳು ಕಲಿಯಬೇಕಾಗಿದೆ. ಕೊಚ್ಚೆ ಬಗ್ಗೆ ಮಾತನಾಡುವುದು ಸುಲಭ, ಆದರೆ ಹಂದಿಗಳಿಗೆ ಕೊಚ್ಚೆಯ ಬಗ್ಗೆ ಗೊತ್ತಾಗುತ್ತದೆ ಎಂದರು.

ಶಿಕ್ಷಣದಲ್ಲಿ ಬದಲಾವಣೆಬೇಕು ನಿಜ ಮುಂದಿನ ವರ್ಷಗಳಲ್ಲಿ ಉನ್ನತ ಹಾಗೂ‌ ಪ್ರಾಥಮಿಕ ಶಿಕ್ಷಣ ಸಚಿವರುಗಳಾದ ಸುಧಾಕರ್ ಹಾಗೂ ಮಧು ಬಂಗಾರಪ್ಪನವರ ಪ್ರಯತ್ನದಿಂದ ಈ ಬದಲಾವಣೆ ಆಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ‌ ಅವಶ್ಯಕವಾಗಿದೆ. ಹಾಗಾಗಿಯೇ ಈಗಾಗಲೇ 8ನೇ ತರಗತಿಯಿಂದ 10ನೇ ತರಗತಿಯವರೆಗೆ ಕೆಲವು ಬದಲಾವಣೆಗಳನ್ನು ತರಲಾಗಿದೆ ಎಂದರು.

ಕೋಚಿಂಗ್ ಸೆಂಟರ್‌ಗಳ ಬಗ್ಗೆ ಮಾತನಾಡಿದ ಅವರು, ಇಂದು ಕೋಚಿಂಗ್ ಸೆಂಟರ್‌ಗಳು ಅನಿವಾರ್ಯವಾಗುತ್ತಿದೆ.‌ ಸುಮಾರು 6 ಸಾವಿರ ಕೋಟಿ ಜಿಎಸ್‌ಟಿಯನ್ನು ಕೋಚಿಂಗ್ ಸೆಂಟರ್‌ಗಳು ಸರ್ಕಾರಕ್ಕೆ ಕಟ್ಟುತ್ತಿವೆ. ಆದ್ದರಿಂದ ಅದರ ನಿಯಂತ್ರಣ
ಕಷ್ಟವಾಗುತ್ತದೆ. ಒಬ್ಬ ವಿದ್ಯಾರ್ಥಿಯಿಂದ ನೂರು ರೂ.‌ತೆಗೆದುಕೊಂಡರೆ ಅದರಲ್ಲಿ 40 ರೂ.ನ್ನು ಸರ್ಕಾರಕ್ಕೆ ವಾಪಾಸ್ಸು ಮಾಡುತ್ತೇವೆ. ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆಯಿರುವುದು ನಿಜ. ಆಗಾಗಿಯೇ ಅವುಗಳನ್ನು ಬಲಪಡಿಸಬೇಕು. ಪಿಯುಸಿಯಲ್ಲಿ ಖಾಸಗಿ ಕಾಲೇಜು ಬಯಸುವ ವಿದ್ಯಾರ್ಥಿ ಎಂ.ಬಿ.ಬಿ.ಎಸ್.ನಲ್ಲಿ ಸರ್ಕಾರಿ ಕಾಲೇಜುನ್ನು ಬಯಸುತ್ತಾನೆ ಎಂದರು.

ಚಿಕ್ಕಬಳ್ಳಾಪುರ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಕುಸಿಯುತ್ತಿರುವುದನ್ನು ಕಂಡ ನಾನು ಸೂಪರ್ 60 ಎಂಬ ವಿನೋತನ ಪ್ರಯೋಗಕ್ಕೆ ಮುಂದಾಗಿದ್ದೇನೆ. ಈ ಯೋಜನೆಯಲ್ಲಿ 120 ವಿದ್ಯಾರ್ಥಿಗಳಿಗೆ ನನ್ನ ಪರಿಶ್ರಮ ಅಕಾಡೆಮಿಯಲ್ಲಿಯೇ 3 ತಿಂಗಳು‌ ತರಬೇತಿ ನೀಡುತ್ತೇನೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ 60 ಅನಾಥ, ಸಿಂಗಲ್ ಫೆರೆಂಟ್ ಬಡ ವಿದ್ಯಾರ್ಥಿಗಳನ್ನು ಬೆಂಗಳೂರಿನಲ್ಲಿ ವಿಶೇಷ ತರಬೇತಿ ನೀಡುವೆ. ಆಗಾಗಿ ಇದರಿಂದ ಫಲಿತಾಂಶ ಬೇರೆಯೇ ಸಿಗುತ್ತದೆ. ಇದನ್ನು ನನ್ನ ಸ್ವಂತ ಖರ್ಚಿನಲ್ಲಿ ಮಾಡುತ್ತೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಕರಘಟ್ಟ ರಮೇಶ್,ಮುಖಂಡ ಜಿ.ಡಿ. ಮಂಜುನಾಥ್, ಪ್ರಮುಖರಾದ ಹೆಚ್.ಪಿ.ಗಿರೀಶ್, ಮಧುಸೂದನ್, ಚೇತನ್, ದಿನೇಶ್, ಇಕ್ಕೇರಿ ರಮೇಶ್, ಪ್ರವೀಣ್ ಮುಂತಾದವರು ಇದ್ದರು.

Leave A Reply

Your email address will not be published.

error: Content is protected !!