ಪತ್ರಿಕೆಗಳು ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕು ; ಸಂಸದ ಬಿ.ವೈ. ರಾಘವೇಂದ್ರ

0 34

ಶಿವಮೊಗ್ಗ : ಪತ್ರಕರ್ತರು ಹೊಸ ಜಗತ್ತಿಗೆ, ಹೊಸ ಆಯಾಮಗಳಿಗೆ ತೆರೆದುಕೊಳ್ಳಬೇಕು ಎಂದು‌ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಅವರು ಇಂದು ಪ್ರೆಸ್ ಟ್ರಸ್ಟ್ ಹಾಗೂ‌ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕನ್ನಡ ಪತ್ರಿಕೋದ್ಯಮಕ್ಕೆ ತನ್ನದೇ ಆದ ಇತಿಹಾಸವಿದೆ. ಶಿವಮೊಗ್ಗ ಜಿಲ್ಲೆ ಕೂಡ ಪತ್ರಿಕೋದ್ಯಮಕ್ಕೆ ಹೆಸರಾಗಿದೆ. ಇಲ್ಲಿ ಅನೇಕ ಪ್ರಯೋಗಾತ್ಮಕ ಕೆಲಸಗಳು ನಡೆಯುತ್ತಿವೆ.
ಪತ್ರಕರ್ತರ ಸೇವೆ ಎಂಬುದೇ ಒಂದು ಹೆಮ್ಮೆಯಾಗಿದೆ ಎಂದರು.


ಪತ್ರಿಕೆಗಳು ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕು. ಇಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಅಂಶಗಳೆರಡೂ ಇರು‌ತ್ತವೆ. ಇದನ್ನು ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕು. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರವೇ ಮುಖ್ಯ. ಒಬ್ಬ ಪ್ರಾಮಾಣಿಕ ಪತ್ರಕರ್ತ ಬಡವನಾಗಿಯೇ ಉಳಿಯುತ್ತಾನೆ ಎಂದರು.


ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪತ್ರಕರ್ತರು ಒತ್ತಡಗಳ ನಡುವೆ ಕೆಲಸ ಮಾಡುತ್ತಾರೆ. ಪತ್ರಿಕಾ ದಿನಾಚರಣೆ ಎಂಬುದು ಗೌರವವನ್ನು ಹೆಚ್ಚಿಸುವಂಥದ್ದಾಗಿದೆ. ಅದರಲ್ಲೂ ಸಾಧಕರನ್ನು ಗುರುತಿಸಿ ಸನ್ಮಾನ ಮಾಡುವುದು ಬಹಳ ಮುಖ್ಯವಾಗಿದೆ. ಪತ್ರಕರ್ತರು ಸಂಕಷ್ಟಗಳಲ್ಲಿದ್ದಾರೆ. ಪಾಲಿಕೆ ವತಿಯಿಂದಲೂ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಹಣವನ್ನು ತೆಗೆದಿರಿಸಲಾಗಿದೆ. ಇದರ ಸದುಪಯೋಗವನ್ನು ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.


ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಪತ್ರಿಕಾ ರಂಗ ಪವಿತ್ರವಾದ ಮಾಧ್ಯಮವಾಗಿದೆ. ಇಲ್ಲಿ ಕೇವಲ ಸುದ್ದಿಗಳು ಮಾತ್ರ ಇರುವುದಿಲ್ಲ. ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳೂ ಇರುತ್ತವೆ. ಪತ್ರಿಕೆಗಳಲ್ಲಿ ಬರುವ ಅಂಕಣಗಳ ಮೂಲಕ ನಮ್ಮ ಬದುಕನ್ನೇ ತಿದ್ದಿಕೊಳ್ಳಬಹುದಾಗಿದೆ. ಪತ್ರಕರ್ತರು ಜಾಗೃತರಾಗಬೇಕು. ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಮುಖ್ಯವಾಗಿ ಅಧ್ಯಯನ ಶೀಲರಾಗಿರಬೇಕು ಎಂದರು.


ರಾಜ್ಯ ಸರ್ಕಾರಿ ನೌಕರರ ಸಂಘದ ಸಿ.ಎಸ್. ಷಡಾಕ್ಷರಿ ಮಾತನಾಡಿ, ಶಿವಮೊಗ್ಗದಲ್ಲಿ ಪತ್ರಿಕೋದ್ಯಮ ಗಟ್ಟಿಯಾಗಿದೆ. ಅದಕ್ಕೆ ಪೂರಕವಾದ ವಾತಾವರಣವೂ ಇದೆ. ಪತ್ರಕರ್ತರ ಭವನದ ನವೀಕರಣಕ್ಕೆ ಸಂಸದರು ಮತ್ತು ಶಾಸಕರು ಮತ್ತಷ್ಟು ಅನುದಾನ ನೀಡಲಿದ್ದಾರೆ ಎಂದರು ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಎಸ್. ಯಡಗೆರೆ ಪತ್ರಕರ್ತರು ತಮ್ಮನ್ನು ತಾವು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಪತ್ರಕರ್ತರ ಕಲ್ಯಾಣಕ್ಕಾಗಿ ಸಂಘ ಕೆಲಸ ನಿರ್ವಹಿಸುತ್ತಿದೆ. ಇದರ ಜೊತೆಗೆ ಮಾದಕ ವಸ್ತುಗಳ ವಿರೋಧಿ ದಿನಾಚರಣೆ, ಕುಗ್ರಾಮಗಳಿಗೆ ಭೇಟಿ, ಆರೋಗ್ಯ ಶಿಬಿರ ಮುಂತಾದ ಸಾಮಾಜಿಕ ಕಾರ್ಯಕ್ರಮಗಳಿಗೂ ಕೂಡ ಸಂಘ ಸ್ಪಂದಿಸುತ್ತದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತ ಹೊನಕೆರೆ ನಂಜುಂಡೇಗೌಡ, ವಿ.ಎಸ್.ಕೆ. ಮಾಧ್ಯಮ ಪ್ರಶಸ್ತಿ ಪುರಸ್ಕೃತ ಎಂ. ಶ್ರೀನಿವಾಸನ್ ಅವರನ್ನು ಅಭಿನಂದಿಸಲಾಯಿತು ಮತ್ತು ಪತ್ರಿಕಾ ವಿತರಕರಾದ ಕೆ.ಎಸ್. ಕೃಷ್ಣಮೂರ್ತಿ, ಆರ್. ರಾಮಚಂದ್ರ, ಮುದ್ರಣ ವಿಭಾಗದ ತವಮಣಿ ಸಿ., ಹೆಚ್. ಶ್ರೀನಿವಾಸಲು, ಜಾಹೀರಾತು ವಿಭಾಗದ ಜೋಸೆಫ್ ಟೆಲ್ಲಿಸ್, ಜೆ. ರಾಜಣ್ಣ, ಪುಟವಿನ್ಯಾಸಕಿ ಎ. ಸರೋಜ, ಹೆಚ್.ಕೆ. ಉಷಾ, ಭಾವಿತಾ ಶೆಟ್ಟಿರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್. ಚಂದ್ರಕಾಂತ್, ನಾಗರಾಜ್ ನೇರಿಗೆ, ಸಂತೋಷ್ ಕಾಚಿನಕಟ್ಟೆ, ನಿತಿನ್ ಕೈದೊಟ್ಲು, ಗಿರೀಶ್ ಉಮ್ರಾಯ್, ವೈ.ಕೆ. ಸೂರ್ಯನಾರಾಯಣ, ಜೇಸುದಾಸ್ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!