ಬೆಂಕಿ ತಗುಲಿ ಭತ್ತ, ಒಣ ಹುಲ್ಲು ಭಸ್ಮ

0 369

ಸೊರಬ : ಚಂದ್ರಗುತ್ತಿ ಸಮೀಪ ಕಮಲಾಪುರ ಗ್ರಾಮದಲ್ಲಿ ಬೆಂಕಿ ತಗುಲಿ ಭತ್ತದ ಹುಲ್ಲಿನ ಪೆಂಡಿ ಹಾಗೂ ಭತ್ತ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾದ ಘಟನೆ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಕಮಲಾಪುರ ಗ್ರಾಮದ ಸರ್ವೆ ನಂ. 6ರಲ್ಲಿನ ನಾಗರಾಜ ಮತ್ತು 7ರಲ್ಲಿನ ಶೇಖರ ಎಂಬುವವರಿಗೆ ಸೇರಿದ ಪಕ್ಕದ ಜಮೀನಿನಲ್ಲಿ ಯಾರೋ ತರಗೆಲೆಗಳಿಗೆ ಹಚ್ಚಿದ ಬೆಂಕಿಯ ಕಿಡಿ ಇವರ ಜಮೀನಿಗೆ ಆವರಿಸಿ ಜಮೀನಿನಲ್ಲಿದ್ದ ಭತ್ತದ ಹುಲ್ಲು ಮತ್ತು ಕಟಾವು ಮಾಡಿದ್ದ ಭತ್ತಕ್ಕೆ ಆವರಿಸಿ ಸುಮಾರು ಮೂರು ಸಾವಿರ ಹುಲ್ಲಿನ ಪೆಂಡಿ ಮತ್ತು ಹತ್ತು ಕ್ವಿಂಟಾಲ್ ಭತ್ತ ಸಂಪೂರ್ಣ ಭಸ್ಮವಾಗಿದೆ.

ಇದರಲ್ಲಿ ನಾಗರಾಜ ಅವರಿಗೆ ಸೇರಿದ 2 ಸಾವಿರ ಹುಲ್ಲಿನ ಪೆಂಡಿ, 10 ಕ್ವಿಂಟಾಲ್ ಭತ್ತ ಹಾಗೂ ಶೇಖರ ಅವರಿಗೆ ಸೇರಿದ 1 ಸಾವಿರ ಹುಲ್ಲಿನ ಪೆಂಡಿ ಎಂದು ತಿಳಿದು ಬಂದಿದೆ.

ಅಕ್ಕಪಕ್ಕದ ಜಮೀನಿನಲ್ಲಿ ಯಾವುದೇ ಬೆಳೆ ಇಲ್ಲದ ಕಾರಣ ಬೆಂಕಿ ಮುಂದುರೆದಿಲ್ಲ. ತಾಲೂಕಿನಲ್ಲಿ ಆವರಿಸಿರುವ ಬರದ ನಡುವೆಯೂ ಭತ್ತ ಬೆಳೆದ ತಮಗೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಮಾರು ಒಂದು ಲಕ್ಷ ರೂ.ಗಳಷ್ಟು ಫಸಲು ನಾಶವಾಗಿದೆ.

ಬ್ಯಾಂಕ್ ಮತ್ತು ಖಾಸಗಿ ಸಂಘ-ಸಂಸ್ಥೆಗಳಲ್ಲಿ ಬೆಳೆಗಾಗಿ ಸಾಲ ಮಾಡಿದ್ದ ನಮಗೆ ಇದರಿಂದ ಜೀವನ ನಿರ್ವಹಣೆ ಇನ್ನಷ್ಟು ಬಿಗಡಾಯಿಸಿದೆ. ಆದ್ದರಿಂದ ಅಧಿಕಾರಿಗಳು ತಕ್ಷಣ ಪ್ರಕರಣ ದಾಖಲಿಸಿಕೊಂಡು ಪರಿಹಾರ ನೀಡುವಂತೆ ಹುಲ್ಲು ಮತ್ತು ಭತ್ತ ಕಳೆದುಕೊಂಡ ನಾಗರಾಜ ಮತ್ತು ಶೇಖರ ಅಧಿಕಾರಿಗಳ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಚಂದ್ರಗುತ್ತಿ ಪೊಲೀಸ್ ಠಾಣೆಯ ದಫೇದಾರ್ ಸಂತೋಷ್ ಮತ್ತು ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿ ರಮೇಶ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!