ಮಂಗನ ಕಾಯಿಲೆಯಿಂದ ಯುವತಿ ಸಾವು, ಡಿಹೆಚ್ಒ ಅಮಾನತಿಗೆ ಆಗ್ರಹ

0 427

ಶಿವಮೊಗ್ಗ : ಮಂಗನ ಕಾಯಿಲೆಯಿಂದ (ಕೆಎಫ್‌ಡಿ) ಮೊನ್ನೆ ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮದ ಯುವತಿ ಸಾವಿಗೀಡಾಗಿದ್ದು, ಇದು ಇಲಾಖೆ ಸುಳ್ಳು ವರದಿ ನೀಡಿ, ಸೂಕ್ತ ಕಾಲದಲ್ಲಿ ಚಿಕಿತ್ಸೆ ಕೊಡದೆ ಇರುವುದರಿಂದ ಸಂಭವಿಸಿದ್ದಾಗಿದೆ. ಆದ್ದರಿಂದ ತಪ್ಪಿಸತ್ಥ ಡಿಎಚ್ ಓ ಮತ್ತು ಇತರ ಆರೋಗ್ಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕೆಂದು ಕೆಎಫ್‌ಡಿ ಜನಜಾಗೃತಿ ಒಕ್ಕೂಟ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಸಂಚಾಲಕ ಕೆ ಪಿ ಶ್ರೀಪಾಲ್ ಮತ್ತು ಶಶಿ ಸಂಪಳ್ಳಿ, ಯುವತಿಯ ರಕ್ತದ ಮಾದರಿ ಫಲಿತಾಂಶ ತಿರುಚುವ ಮೂಲಕ ಸುಳ್ಳು ವರದಿ ನೀಡಿ, ಸೂಕ್ತ ಕಾಲದಲ್ಲಿ ಅವಶ್ಯಕ ಚಿಕಿತ್ಸೆ ಸಿಗದಂತೆ ಮಾಡಲಾಗಿದೆ. ಜೊತೆಗೆ ಶಿವಮೊಗ್ಗದಲ್ಲೇ ಚಿಕಿತ್ಸೆ ಕೊಡಿಸುವ ಬದಲು ಮಣಿಪಾಲಕ್ಕೆ ಸಾಗಿಸಲಾಗಿದೆ. ನಾಲ್ಕೈದು ವರ್ಷಗಳಿಂದ ಈ ಕೃತ್ಯವನ್ನು ನಡೆಸಿಕೊಂಡು ಬಂದಿರುವ ಇಲಾಖಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಆರೋಗ್ಯ ಹದಗೆಡುತ್ತಿದ್ದುದರಿಂದ ಯುವತಿಯ ಕಡೆಯವರಿಗೆ ನಗದು ಹಣ ನೀಡಿ ಮಣಿಪಾಲಕ್ಕೆ 5ರಂದು ದಾಖಲಿಸಿರುವ ಸಾಕ್ಷಿ ಸಿಕ್ಕಿದೆ. ಜಿಲ್ಲಾ ಆರೋಗ್ಯ ಇಲಾಖೆಯ ತಪ್ಪು ವರದಿಯಿಂದ ಯುವತಿ ಅಲ್ಲಿ ಪ್ರಾಣ ಬಿಟ್ಟಿದ್ದಾಳೆ. ಡಿಎಚ್ ಓ ತಪ್ಪು ವರದಿ ನೀಡಿರುವ ಬಗ್ಗೆ ದಾಖಲೆಗಳಿವೆ. ಆಕೆಗೆ ಡೆಂಗ್ಯೂ ಇರುವುದಾಗಿ ಮಾಧ್ಯಮಗಳಿಗೆ ಡಿಎಚ್‌ಓ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಯುವತಿಯ ಸಹೋದರಿಯ ವಿಷಯದಲ್ಲೂ ಸುಳ್ಳು ವರದಿ ನೀಡಲಾಗಿದೆ. ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಿ ಸಾರ್ವಜನಿಕರು ಮತ್ತು ಮಾಧ್ಯಮದವರ ಗಮನ ಈ ಕಡೆ ಹರಿಯದಂತೆ ಡಿಎಚ್‌ಓ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೂಡಲೇ ಸಂಬಂಧಿತ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ವಿಡಿಎಲ್ ಲ್ಯಾಬ್‌ಗೆ ಬೀಗಮುದ್ರೆ ಹಾಕಬೇಕು. ಅಲ್ಲಿನ ದತ್ತಾಂಶಗಳನ್ನು ರಕ್ಷಿಸಬೇಕು. ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಆಕೆಯ ಸಹೋದರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಅದರ ಸಂಪೂರ್ಣ ವೆಚ್ಚವನ್ನು ಇಲಾಖೆ ಭರಿಸುವಂತೆ ಮಾಡಬೇಕೆಂದು ಆರೋಗ್ಯ ಸಚಿವರಿಗೆ ಒಕ್ಕೂಟ ಮನವಿ ಮಾಡಿದೆ.

ಜ 3ರಂದು ಯುವತಿಗೆ ನಡೆಸಿದ ರಕ್ತದ ಪರೀಕ್ಷೆಯಲ್ಲಿ ನೆಗೆಟಿವ್ ಬಾರದೆ ಇದ್ದರೂ ಸುಳ್ಳು ವರದಿ ನೀಡಲಾಗಿದೆ. ನಂತರ ಕೆಎಫ್ ಡಿ ಸೋಂಕಿಗೆ ನಿಡಬೇಕಾದ ಚಿಕಿತ್ಸೆ ಕೊಡಿಸಲಿಲ್ಲ. ಕೆಎಫ್‌ಡಿ ಹೊರತುಪಡಿಸಿ ಇತರೆ ಸಾಮಾನ್ಯ ಚಿಕಿತ್ಸೆಯನ್ನು ಕೊಡಿಸಲಾಗಿದೆ. ಯುವತಿ ಆರೋಗ್ಯ ಇದರಿಂದ ದಿಢೀರನೆ ಕ್ಷೀಣಿಸಿದಾಗ ರಕ್ತದ ಮರುಪರೀಕ್ಷೆಗೆ 4 ರಂದು ಮತ್ತೆ ಕಳಿಸಿಡೊಲಾಗಿತ್ತು. ಅದರಲ್ಲಿ ಕೆಎಫ್‌ಡಿ ವೈರಾಣು ಇರುವುದು ಪತ್ತೆಯಾಗಿತ್ತು. ಆಗಲೂ ಸೋಂಕು ದೃಢಪಟ್ಟಿರುವ ಬಗ್ಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ತಿಳಿಸಿಲ್ಲ. ಅದೇ ದಿನ ಇನ್ನೊಂದು ಬಾರಿ ರಕ್ತ ಪರೀಕ್ಷಿಸಿದಾಗಲೂ ಸೋಂಕು ದೃಢವಾಗಿದೆ ಎಂದರು

Leave A Reply

Your email address will not be published.

error: Content is protected !!