ಫಲವತ್ತಾದ ಮಣ್ಣಿನಿಂದ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ಉತ್ಪಾದಿಸಲು ಸಾಧ್ಯ ; ಡಾ. ಗಣಪತಿ

0 257

ರಿಪ್ಪನ್‌ಪೇಟೆ : ಫಲವತ್ತಾದ ಮಣ್ಣಿನಿಂದ ಉತ್ತಮ ಹಾಗೂ ಗುಣಮಟ್ಟದ ಆರೋಗ್ಯಕರ ಆಹಾರ ಉತ್ಪನ್ನಗಳನ್ನು ತಯಾರಿಸಲು ಸಾಧ್ಯ. ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಪ್ರಾಧ್ಯಾಪಕ ಡಾ. ಗಣಪತಿ ಹೇಳಿದರು.

ಗವಟೂರು ಗ್ರಾಮದ ಕೃಷಿಕ ರಾಮಚಂದ್ರ ತೋಟದಲ್ಲಿ ರೋಟರಿ ಕ್ಲಬ್ ರಿಪ್ಪನ್‌ಪೇಟೆ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ ಮಣ್ಣೇಹೊನ್ನು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು, ಮಣ್ಣಿನ ಫಲವತ್ತತೆ ನೈಸರ್ಗಿಕವಾದುದು, ಇತ್ತೀಚಿಗೆ ಅಧಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯ ಜೊತೆಗೆ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದೆ. ನಾವು ಸತ್ತರೆ ಮಣ್ಣು ಸೇರುತ್ತೇವೆ. ಮಣ್ಣು ಸತ್ತರೆ ಮಾಡುವುದೇನು ಎಂದು ಹೇಳಿದ ಅವರು, ಇತ್ತೀಚೆಗೆ ಮಣ್ಣಿನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಕೃಷಿಕರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಡಾ. ಕೆ.ಎಸ್. ನಿರಂಜನ್ ಮಾತನಾಡಿ, ಮಣ್ಣು ಪರೀಕ್ಷೆ ಯಾಕಾಗಿ ಮಾಡಬೇಕು. ಮಣ್ಣು ಮಾದರಿಯನ್ನು ವೈಜ್ಞಾನಿಕ ರೀತಿಯಲ್ಲಿ ಹೇಗೆ ತೆಗೆಯುವುದು. ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಯುವ ಬಗೆ ಹಾಗೂ ಅಡಿಕೆ ಸಿಪ್ಪೆಯಿಂದ ಗೊಬ್ಬರ ಮಾಡುವ ವಿಧಾನದ ಮಾಹಿತಿ ನೀಡಿ, ಕೃಷಿ ಮತ್ತು ತೋಟಾರಿಕೆಗೆ ಸಂಭಂದಪಟ್ಟ ಯಾವುದೇ ಸಮಸ್ಯೆಯಿದ್ದಲ್ಲಿ ರೈತರು ನೇರವಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬಹುದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಮಾದರಿ ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ. ಎಂ.ಪರಮೇಶ್ ಮಾತನಾಡಿ, ರೈತರುಗಳ ಕೃಷಿ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿ ಹಾಗೆ ರೈತರಿಗೆ ಬಡ್ಡಿರಹಿತ ಸಾಲ ನೀಡುತ್ತಿದೆ. ಇದರ ಸದುಪಯೋಗ ಪಡೆಯುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿ ಹೊಂದಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ ಎಂದರು.

ಕೃಷಿ ಸಂಪರ್ಕ ಕೇಂದ್ರದ ಅಧಿಕಾರಿ ಶಾಂತಮೂರ್ತಿ ಮಾತನಾಡಿ, ಮಣ್ಣನ್ನು ಹೊನ್ನಿಗೆ ಹೋಲಿಸಿ ಹೊನ್ನಿಗಿಂತಲು ಶ್ರೇಷ್ಠವಾದದ್ದು ಮಣ್ಣು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ದೇವದಾಸ್ ಆರ್.ಎಚ್. ವಹಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ, ಗಣಪತಿ ಹೆಚ್.ಎಸ್., ಕೃಷಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಎಸ್. ಜಿ .ಶಶಿಕಲಾ ಹಾಗೂ ರೋಟರಿ ಸಂಸ್ಥೆಯ ಎಂ.ಬಿ ಲಕ್ಷ್ಮಣಗೌಡ, ಡಾ. ಬಿ.ಕೆ.ಶಿವಣ್ಣ,ಮುಖ್ಯಸ್ಥರು ರೈತ ತರಬೇತಿ ಕೇಂದ್ರ,ಇರುವಕ್ಕಿ ಇನ್ನಿತರರಿದ್ದರು.

ದೇವದಾಸ್ ಆರ್.ಹೆಚ್. ಸ್ವಾಗತಿಸಿ, ಕು|| ನವ್ಯ ನಿರೂಪಿಸಿ, ರೋಟರಿ ಸಂಸ್ಥೆ ಕಾರ್ಯದರ್ಶಿಎಂ ರಾಮಚಂದ್ರ ವಂದಿಸಿದರು.

Leave A Reply

Your email address will not be published.

error: Content is protected !!