ಮಣ್ಣು ಮಾದರಿ ಸಂಗ್ರಹಣೆ, ಹಸಿರೆಲೆ ಗೊಬ್ಬರ ಕುರಿತು ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ

0 309

ಹೊಸನಗರ‌ : ಆನಂದಪುರ ಸಮೀಪದ ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಮಹಾವಿದ್ಯಾಲಯ ಜಂಟಿಯಾಗಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ಪದವಿಯ ‘ಗಂಧದಗುಡಿ’ ತಂಡದ ವಿದ್ಯಾರ್ಥಿಗಳಿಗಾಗಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಮ್ಮಿಕೊಂಡಿತ್ತು.

ಮಣ್ಣು ಮಾದರಿಯ ಸಂಗ್ರಹಣೆ ಮತ್ತು ಹಸಿರೆಲೆ ಗೊಬ್ಬರಗಳು ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮಣ್ಣು ಸಂಗ್ರಹಣೆಯಲ್ಲಿ ನಿರ್ವಹಿಸಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸಂಬಂಧಿಸಿದಂತೆ ಸವಿಸ್ತಾರ ಚರ್ಚೆಯ ಬಳಿಕ ಪ್ರಾತ್ಯಕ್ಷಿಕೆ ಏರ್ಪಡಿಲಾಗಿತ್ತು. ಅಲ್ಲದೆ, ಜೈವಿಕ ಗುಣಗಳ ಮೇಲೆ ಹಸಿರೆಲೆ ಗೊಬ್ಬರದ ಪ್ರಭಾವ, ಬೆಳೆಯುವ ವಿಧಾನ, ಹಸಿರೆಲೆ ಗೊಬ್ಬರದ ಬೆಳೆಗಳ ವಿಶೇಷ ಗುಣಲಕ್ಷಣಗಳು ಹಾಗೂ ಬಳಸುವಲ್ಲಿ ಬರುವ ಬಾಧಕ ಕುರಿತಂತೆ ರೈತಾಪಿಗಳ ಜೊತೆ ಸಂವಾದ ನಡೆಯಿತು.

ರೈತರು ತಮ್ಮ ಹಲವು ಸಮಸ್ಯೆಗಳನ್ನು ಮುಕ್ತವಾಗಿ ಸಮಲೋಚಿಸಿದರು. ಕೆಳನಾಶಕ ಬಳಕೆ ಸೂಕ್ತವೇ ?! ಎಂಬ ರೈತ ಕೇಳಿದ ಪ್ರಶ್ನೆಯೊಂದಕ್ಕೆ ಶಿಬಿರದ ಸಂಪನ್ಮೂಲ ವ್ಯಕ್ತಿ ಡಾ. ನಿರಂಜನ್ ಮಾತನಾಡಿ, ‘ಕಳೆನಾಶಕಗಳು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತವೆ. ಇದರಿಂದಾಗಿ ಜೈವಿಕ ವಿಘಟನೆ ಕ್ರಿಯೆ ಕುಂಠಿತಗೊಂಡು, ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಕುಂಠಿತಗೊಂಡು ಇಳುವರಿ ಕುಗ್ಗುತ್ತದೆ. ಆ ಕಾರಣಕ್ಕೆ ಕೈಯಿಂದ ಕಳೆಯನ್ನು ಕಿತ್ತು ನಿಯಂತ್ರಣ ಮಾಡುವುದು ಸೂಕ್ತ’ ಎಂದು ತಿಳಿಸಿದ ಅವರು, ಬಳಿಕ ಮಣ್ಣು ಪರೀಕ್ಷೆ ವರದಿಯ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು.

ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಡಾ. ಹೊನ್ನಪ್ಪ ಮಾತನಾಡಿ, ‘ಮಣ್ಣು ರೈತನ ಹೊನ್ನು’. ಅದರ ಫಲವತ್ತತೆ ಕಾಪಾಡುವುದು ರೈತನ ಮುಖ್ಯ. ಕೆಲಸ. ರೈತರು ರಾಸಾಯನಿಕ ಗೊಬ್ಬರ ಬಳಸದೆ ಹಸಿರೆಲೆ ಗೊಬ್ಬರ ಬಳಸುವ ಮೂಲಕ ರೈತನ ಹೊನ್ನಿನ ಫಲವತ್ತತೆ ಕಾಪಾಡಬೇಕು ಹಾಗೂ ಬಾಹ್ಯ ಮೂಲ ಹಸಿರೆಲೆ ಗೊಬ್ಬರದ ತಯಾರಿಕೆಗೆ ಹೆಚ್ಚು ಕಾರ್ಮಿಕರ ಅವಶ್ಯಕತೆ ಇದೆ ಎಂದು ರೈತರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

ವಾರ್ಷಿಕ ಬೆಳೆಗಳಾದ ಅಲಸಂದಿ, ಹೆಸರು, ದೈಂಚಾ ಹಾಗು ಹುರಳಿ ಬೆಳೆಯಲು ಶಿಫಾರಸ್ಸು ಮಾಡಲಾಯಿತು. ಶಿಬಿರದಲ್ಲಿ 25ಕ್ಕೂ ಹೆಚ್ಚು ರೈತಾಪಿಗಳು, ಕೃಷಿ ಸಖಿಯರು, ಶಾಲಾ ಶಿಕ್ಷಕರು, ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರು ಹಾಜರಿದ್ದರು.

Leave A Reply

Your email address will not be published.

error: Content is protected !!