ಮಾಹಿತಿ ಹಕ್ಕಿನಿಂದ ಬಹಿರಂಗ | ಭೂಪರಿವರ್ತನೆ ಹೆಸರಿನಲ್ಲಿ ನಕಲಿ ನಿರಾಕ್ಷೇಪನಾ ಪತ್ರ ದಾಖಲೆ ಸೃಷ್ಟಿಸಿ ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆ ಮಂಜೂರಾತಿ ಪಡೆಯುವ ಹುನ್ನಾರ ! ಗ್ರಾ.ಪಂ. ಸದಸ್ಯನ ಗಂಭೀರ ಆರೋಪ

0 538

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮಪಂಚಾಯ್ತಿ ವಸತಿ ನಿವೇಶನ ಉದ್ದೇಶಕ್ಕಾಗಿ ಭೂಪರಿವರ್ತನೆಯನ್ನು ಮಾಡಿರುವ ಕೆಲವು ಲೇಔಟ್‌ಗಳು ನಿಯಮವನ್ನು ಉಲ್ಲಂಘಿಸಿದ್ದು ಈ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಆರೋಪಿಸಿದರು.

ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗವಟೂರು ಗ್ರಾಮದ ಸರ್ವೇ ನಂ 361/2 ರಲ್ಲಿ 1.09 ಎಕರೆ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತಿಸಲು ಅರ್ಜಿಸಲ್ಲಿಸಿರುತ್ತಾರೆ. ಆದರೆ ಈ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ನಿಯಾಮಾನುಸಾರ ಇಲ್ಲದೆ ಇರುವುದು ವಾಸ್ತವವಾಗಿದ್ದು ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು 30 ಅಡಿ ರಸ್ತೆ ಇರುವುದಕ್ಕೆ ನಿರಾಕ್ಷೇಪಣಾ ಪತ್ರ ನೀಡಿರುತ್ತಾರೆ ಎಂದು ತಿಳಿಸಿದರು.

ಅರ್ಜಿದಾರರು ಭೂಪರಿವರ್ತನಾ ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿಸಲ್ಲಿದ್ದ ಪ್ರಯುಕ್ತ 2022 ರ ಮಾ.23 ರಂದು ಒಂದೇ ದಿನ ಗ್ರಾಮ ಪಂಚಾಯ್ತಿ ಎರಡು ನಿರಾಕ್ಷೇಪಣಾ ಪತ್ರವನ್ನು ನೀಡಿದೆ. ಆದರೆ ಎರಡೂ ಪತ್ರದಲ್ಲಿಯೂ ರಸ್ತೆಯ ಬಗ್ಗೆ ಎರಡು ಅಭಿಪ್ರಾಯವನ್ನು ನೀಡಿರುತ್ತಾರೆ. ಒಂದರಲ್ಲಿ 30 ಅಡಿ ರಸ್ತೆಯಿದೆ ಎಂದು ದೃಢೀಕರಿಸಿದರೆ ಇನ್ನೊಂದರಲ್ಲಿ ರಸ್ತೆಯ ಉಲ್ಲೇಖವೇ ಇರುವುದಿಲ್ಲ. ಇದರಿಂದ ದಲ್ಲಾಳಿಗಳು ದಾಖಲೆ ಸೃಷ್ಟಿಸುವಲ್ಲಿ ಅಸಲಿ-ನಕಲಿ ಆಟವಾಡಿದ್ದಾರೆ ಎಂಬ ಅನುಮಾನ ಮೂಡಿದೆ ಎಂದು ದೂರಿದರು.

ಮಾಹಿತಿ ಹಕ್ಕಿನಡಿ ದಾಖಲಾತಿ ಪಡೆದಾಗ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ದಾಖಲಾಯಲ್ಲಿ ಮಾತ್ರ 30 ಅಡಿ ರಸ್ತೆ ಇರುವ ಗ್ರಾಮ ಪಂಚಾಯ್ತಿ ದೃಢೀಕೃತ ಪತ್ರವಿದ್ದು ಗ್ರಾಮ ಪಂಚಾಯ್ತಿ ಕಡತದಲ್ಲಿ ಈ ದಾಖಲೆಯೇ ಇರುವುದಿಲ್ಲ. ಇದರ ನ್ಯೂನ್ಯತೆಯನ್ನು ಅರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಅರ್ಜಿಸಲ್ಲಿಸಿದಾಗ ಪಂಚಾಯ್ತಿ ಅಭಿವೃದ್ಧಿ ಆಧಿಕಾರಿಗಳು ಸ್ಥಳ ಪರಿಶೀಲನೆಯಲ್ಲಿ 22 ಅಡಿ ರಸ್ತೆಯಿದೆ ಎಂಬುದು ವರದಿ ನೀಡಿದ್ದಾರೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಾದ್ಯಂತ ಹಲವು ಲೇಔಟ್‌ಗಳಲ್ಲಿಯೂ ಇದೇ ರೀತಿಯ ನಿಮಯ ಉಲ್ಲಂಘನೆಯಾಗಿರುವುದು ಕಾಣಬಹುದು. ಈ ಎಲ್ಲಾ ದಾಖಲಾತಿಗಳ ಮರುಸೃಷ್ಠಿಯಲ್ಲಿ ಭೂಮಾಫಿಯಾ ತಂಡ ಕಾರ್ಯನಿರ್ವಹಿಸುತ್ತಿದ್ದು ಜನಸಾಮಾನ್ಯರಿಗೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಲೇಔಟ್‌ಗಳ ಭೂ ಪರಿವರ್ತನೆಯನ್ನು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಜರುಗಿಬೇಕು. ಪ್ರತಿನಿತ್ಯ ಗ್ರಾಮ ಪಂಚಾಯ್ತಿನಲ್ಲಿ ಭೂಮಾಫಿಯಾದವರೆ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದು ಜನಸಾಮಾನ್ಯರನ್ನು ಕಡೆಗಣಿಸಲಾಗುತ್ತಿದೆ. ಸಮಗ್ರ ತನಿಖೆಯೊಂದಿಗೆ ಭೂಮಾಫಿಯಾದವರ ಆಟಾಟೋಪಕ್ಕೆ ಕಡಿವಾಣ ಹಾಕಿ ನಿವೇಶನ ಖರೀದಿದಾರರಿಗೆ ನಿಯಮಾನುಸಾರ ಮೂಲ ಸೌಕರ್ಯ ಒದಗಿಸುವಂತಾಗಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ ಗಂಭೀರ ಆರೋಪ ಮಾಡಿದ್ದಾರೆ.

Leave A Reply

Your email address will not be published.

error: Content is protected !!