ಮೀಸಲು ಅರಣ್ಯ ಖಾಸಗಿಯವರಿಗೆ ಅಕ್ರಮ ಮಾರಾಟ, ಗ್ರಾಮಸಭೆಯಲ್ಲಿ ಗ್ರಾಮಸ್ಥರ ಗಂಭೀರ ಆರೋಪ

0 631

ಹೊಸನಗರ : ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದ ಸ.ನಂ 57 ರಲ್ಲಿ ಹತ್ತಾರು ಎಕರೆ ಮೀಸಲು ಅರಣ್ಯ (Reserve Forest) ಭೂಮಿಯನ್ನು ಅಕ್ರಮವಾಗಿ ವ್ಯಕ್ತಿಯೋರ್ವ ಮಾರಾಟ (Sales) ಮಾಡಿದ್ದಾರೆ ಎಂಬ ಗಂಭೀರ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.

ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ಡಿ. ಮಂಜುನಾಥ್ ಅರಣ್ಯ ಇಲಾಖೆ ಕಾರ್ಯವೈಖರಿ ಕುರಿತಂತೆ ಬೇಸರ ವ್ಯಕ್ತಪಡಿಸಿ, ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಕುರಿತು ತಪ್ಪಿತಸ್ತರ ವಿರುದ್ದ ಸೂಕ್ತ ಕ್ರಮಕ್ಕೆ ಮುಂದಾಗ ಬೇಕೆಂದು ವಿಷಯ ಪ್ರಸ್ಥಾಪಿಸಿ ಸಭೆಯ ಗಮನ ಸೆಳೆದರು.

ಪಶು ವೈದ್ಯ ಇಲಾಖೆ ಪರಿವೀಕ್ಷಕ ಮಲ್ಲಿಕಾರ್ಜುನ್ ಮಾತನಾಡಿ, ನಾಯಿ ಸಾಕಾಣಿಕೆಗೆ ಪಂಚಾಯತಿ ಅನುಮತಿ ಕಡ್ಡಾಯವಾಗಿದ್ದು, ರೇಬಿಸ್ ರೋಗ ತಡೆಗೆ ಜನಜಾಗೃತಿ ಮೂಡಿಸುವುದು ಹಾಗೂ ಚುಚ್ಚುಮದ್ದು ನೀಡುವ ಶಿಬಿರ ಆಯೋಜಿಸಲು ಪಂಚಾಯತಿ ವ್ಯಾಪ್ತಿಯಲ್ಲಿ ಅನುವು ಮಾಡಿಕೊಡುವಂತೆ ವಿನಂತಿಸಿದರು. ಮಂಗನ ಉಪಟಳ ಹೆಚ್ಚಾಗಿದೆ ಎಂಬ ಗ್ರಾಮಸ್ಥರ ಮನವಿಗೆ ಹಿಡಿದು ಬೇರೆಡೆಗೆ ವರ್ಗಾವಣೆ ಮಾಡುವುದೇ ಅವುಗಳ ಹತೋಟಿಗೆ ಇರುವ ಸೂಕ್ತ ಮಾರ್ಗವೆಂದರು. ಅಲ್ಲದೆ, ಇಲಾಖೆಯಿಂದ ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಪಶುಗಳ ಮಾಹಿತಿ ಸಂಗ್ರಹಕ್ಕಾಗಿ ‘ಪಶುಸಖಿ’ಯರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು ತಲಾ ಮೂರು ಸಾವಿರ ರೂ. ಗೌರವಧನ ನೀಡಲಾಗುವುದು. ಆಸಕ್ತರು ಪಶು ಇಲಾಖೆ ಅಧಿಕಾರಿಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಗ್ರಾಮ ಪಂಚಾಯತಿ ಪಿಡಿಓ ಎಸ್. ರವಿಕುಮಾರ್, ಚುನಾಯಿತ ಜನಪ್ರತಿನಿಧಿಗಳಿಗೆ ಕೇಳಿದ ದಾಖಲೆ, ಸೂಕ್ತ ಮಾಹಿತಿ ನೀಡದೆ, ಕಚೇರಿ ವೇಳೆ ಅಗೌರದಿಂದ ಕಾಣುತ್ತಿದ್ದಾರೆ. ಅಲ್ಲದೆ, ಪ್ರತಿಯೊಬ್ಬರಿಗೂ ಏಕವಚನದಿಂದಲೇ ಸಂಭೋಧಿಸುತ್ತಾರೆ. ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಸೂಕ್ತ ಸಮವಸ್ತ್ರವೇ ಇಲ್ಲ. ಇದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ನಡುವಿನ ವ್ಯತ್ಯಾಸ ಜನಸಾಮಾನ್ಯರಿಗೆ ತಿಳಿಯದಾಗಿದೆ. ಕೂಡಲೇ ಈ ಕುರಿತು ಸೂಕ್ತ ಕ್ರಮಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಕಚೇರಿ ಮುಂಭಾಘ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುವುದಾಗಿ ಸದಸ್ಯ ಜಿ.ಎನ್. ಪ್ರವೀಣ್ ಇಂದು ಗ್ರಾಮಸ್ಥರ ನಡುವೆ ಕುಳಿತೇ ತಮ್ಮ ಸಭೆಗೆ ವಿರೋಧ ವ್ಯಕ್ತ ಪಡಿಸಿದ್ದು ಇಂದಿನ ಗ್ರಾಮ ಸಭೆಯ ಹೈಲೈಟ್ ಆಗಿತ್ತು.

ಕೆರೆ, ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಕ್ರಮವಾಗಿ ಅಳವಡಿಸಿರುವ ಪಂಪ್‌ಸೆಟ್ ಬಳಕೆಯನ್ನು ಕೂಡಲೇ ತೆರವುಗೊಳಿಸಬೇಕು. ಅಲ್ಲದೆ ಬರಗಾಲದ ಹಿನ್ನೆಲೆ ಪ್ರತಿಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರು ಸಭೆಯನ್ನು ಒತ್ತಾಯಿಸಿದರು.

ಸದ್ಯಕ್ಕೆ ಹೊಸ ಪಡಿತರ ಚೀಟಿ ಹಂಚಿಕೆ ಉದ್ದೇಶ ಸರ್ಕಾರದ ಮುಂದಿಲ್ಲ. ಸುಳ್ಳು ಮಾಹಿತಿ ನೀಡಿ ಅಕ್ರಮ ಬಿಪಿಎಲ್ ಕಾರ್ಡ್ ಪಡೆದವರ ಪತ್ತೆ ಕಾರ್ಯ ನಡೆದಿದೆ. ಹೊಸದಾಗಿ ಕೇವಲ ಹತ್ತು ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಬಂದಿದ್ದು, ಅಗತ್ಯ ವೈದ್ಯಕೀಯ ಚಿಕಿತ್ಸಾ ಸಂದರ್ಭಗಳಲ್ಲಿ ಮಾತ್ರವೇ ಅರ್ಹ ಬಿಪಿಎಲ್ ಕುಟುಂಬಕ್ಕೆ ಕಾರ್ಡ್ ವಿತರಿಸಲಾಗುವುದು ಎಂಬ ಆಹಾರ ನಿರೀಕ್ಷಕ ನಾಗರಾಜ್ ತಿಳಿಸಿದರು. ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಯಾವುದೇ ಬಿಪಿಎಲ್ ಕುಟುಂಬಗಳ ಪಡಿತರ ಕಾರ್ಡ್‌ನ್ನು ಏಕಾಏಕೀ ರದ್ದು ಪಡಿಸದಂತೆ ಆಹಾರ ನಿರೀಕ್ಷಕರಿಗೆ ಸದಸ್ಯ ಕಾಲಸಸಿ ಸತೀಶ್ ಕಿವಿಮಾತು ಹೇಳಿದರು.


ಬ್ರಹ್ಮೇಶ್ವರ ಪಡಿತರ ವಿತರಣೆ ಅಂಗಡಿಯಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ. ಗ್ರಾಹಕರಿಂದ ಹೆಚ್ಚಿನ ಹಣ ವಸೂಲು ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನಲೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಹಾರ ನಿರೀಕ್ಷಕ ಸಭೆಗೆ ತಿಳಿಸಿದರು.


ಅಂಚೆ ಇಲಾಖೆ ಸಿಬ್ಬಂದಿ ಮಾತನಾಡಿ, ಸರಿ ಮಾಹಿತಿ ನೀಡುವ ಮೂಲಕ ಆಧಾರ್ ತಿದ್ದುಪಡಿ ಮಾಡಿಸಿಕೊಳ್ಳಿ. ಈ ಹಿಂದೆ ಪಿಂಚಣಿ ಖಾತೆ ಅವಲಂಭಿಸಿ ಸರ್ಕಾರ ಪಿಂಚಣಿ ಹಣ ಜಮಾ ಆಗುತ್ತಿತ್ತು. ಆದರೆ ಈಗ ಆಧಾರ್ ಕಾರ್ಡ್ ಮೇಲೆ ಪಿಂಚಣಿ ಹಣ ಜಮಾವಣೆ ಅವಲಂಬಿತ ಆಗಿದೆ. ಆಧಾರ್ ಕಾರ್ಡ್ ತಿದ್ದುಪಡಿ ಶಿಬಿರಗಳ ಮೂಲಕ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಮುಂದಾಗಿ ಎಂದು ಸಲಹೆ ನೀಡಿದರು.
ಗೇರುಪುರ ಶಾಲೆಯ ವಿಶೇಷ ಚೇತನರಿಗಾಗಿ ಹೊಸ ರ‍್ಯಾಂಪ್ ನಿರ್ಮಾಣ, ಜಲಜೀವನ ಯೋಜನೆ ಅಡಿಯಲ್ಲಿ ಸದಸ್ಯರ ಗಮನಕ್ಕೆ ಬಾರದ ತೆಗೆದ ಎರಡು ಕೊಳವೆ ಬಾವಿಗಳ ಕಾಮಗಾರಿ ವಿಫಲ ಸೇರಿದಂತೆ  ಅನೇಕ ವಿಷಯಗಳನ್ನುಕುರಿತಂತೆ ಸಭೆ ಚರ್ಚಿಸಿತ್ತು.

ಗ್ರಾ.ಪಂ. ಅಧ್ಯಕ್ಷ ಓಮಕೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದು, ನೋಡಲ್ ಅಧಿಕಾರಿಯಾಗಿ ಬಿಇಓ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಹೆಚ್. ಸುಧಾ, ಸದಸ್ಯರಾದ ಸವಿತಾ ರಮೆಶ್, ಸಂದಕುಮಾರಿ, ಬೇಬಿ, ಮಹೇಂದ್ರ, ಶ್ರೀಧರ, ದಿವ್ಯಾ, ರಾಘವೇಂದ್ರ, ಶಶಿಕಲಾ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.

Leave A Reply

Your email address will not be published.

error: Content is protected !!