ರೈಲ್ವೆ ಟರ್ಮಿನಲ್ ಗುತ್ತಿಗೆದಾರನ ಬೇಜವಾಬ್ದಾರಿಗೆ ಬಾಲಕಿ ಬಲಿ !

0 225

ಶಿವಮೊಗ್ಗ : ತರಕಾರಿ ಬೆಳೆದು ಬದುಕುತ್ತಿದ್ದ ಸುಂದರ ಸಂಸಾರದ ಮುದ್ದು ಮಗಳು ರೈಲ್ವೆ ಕಾಮಗಾರಿಯ ಅಸಮರ್ಪಕ ಕಾರ್ಯಕ್ಕೆ ಬಲಿಯಾಗಿರುವ ಘಟನೆ ನಿನ್ನೆ ಸಂಜೆ ಶಿವಮೊಗ್ಗ ತಾಲೂಕಿನ ಕೋಟೆಗಂಗೂರಿನಲ್ಲಿ ನಡೆದಿದೆ.

ರೈಲ್ವೆ ಟರ್ಮಿನಲ್ ನಿರ್ಮಾಣದ ಹಿನ್ನೆಲೆಯಲ್ಲಿ ರೈತರಿಂದ ಭೂಮಿ ಪಡೆದು ನಡೆಯುತ್ತಿರುವ ಕಾಮಗಾರಿಯಲ್ಲಿ ಕೋಟೆಗಂಗೂರು ಹಾಗೂ ಅಲ್ಲಿಂದ ಅನ್ಯ ಊರಿನ ಸಂಪರ್ಕ ಹಾಗೂ ತೋಟ ಹೊಲಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಆಳವಾದ ಗುಂಡಿಯನ್ನು ತೆಗೆದಿದ್ದರು. ಅಲ್ಲಿ ಓಡಾಡುವ ಜನರ ರಕ್ಷಣೆಗೆ ಅಗತ್ಯ ವ್ಯವಸ್ಥೆ ಮಾಡಿರಲಿಲ್ಲ.

ನಿನ್ನೆ ಇದೇ ಕೋಟೆಗಂಗೂರಿನಲ್ಲಿ 5ನೇ ತರಗತಿ ಓದುತ್ತಿದ್ದ ಚೈತ್ರಾ ಶಾಲೆಯಿಂದ ಮನೆಗೆ ಬಂದು ಮನೆಯ ಕೀ ತೆಗೆದುಕೊಂಡು ಬರಲು ತಮ್ಮ ತಂದೆ ತಾಯಿ ಕೆಲಸ ಮಾಡುತ್ತಿದ್ದ ಹೊಲದ ಕಡೆ ಹೋಗಿದ್ದಾಳೆ. ಕೀ ಪಡೆದು ವಾಪಾಸಾಗುತ್ತಿದ್ದಾಗ ಮೊನ್ನೆ ಸುರಿದ ಭಾರೀ ಮಳೆಗೆ ಗುಂಡಿಯ ಕಲ್ಲು ಕಳಚಿದ್ದು, ಮಣ್ಣು ಕುಸಿದಿತ್ತು. ಅಲ್ಲಿ ಬರುತ್ತಿದ್ದ ಚೈತ್ರಾ ಗುಂಡಿ ಪಾಲಾಗಿದ್ದಾಳೆ.

ಅಂತೆಯೇ ಸಂಜೆ ಚೈತ್ರಾ ತಂದೆ ಶ್ರೀನಿವಾಸ್ ಹಾಗೂ ಅವರ ಪತ್ನಿ ಮನೆಗೆ ಬಂದು ನೋಡಿದರೆ ಚೈತ್ರಾ ಬಂದಿಲ್ಲ ಎಂಬುದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಎಲ್ಲೆಡೆ ಅವರು ಹಾಗೂ ಗ್ರಾಮಸ್ಥರು ಹುಡುಕಿದ್ದಾರೆ. ರಾತ್ರಿ ಗುಂಡಿಯಲ್ಲಿ ಸಾವು ಕಂಡಿರುವ ಚೈತ್ರಾ ಪತ್ತೆಯಾಗಿದ್ದಾಳೆ. ಈ ಸಂಬಂಧ ಶ್ರೀನಿವಾಸ್ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಕ್ರಮಕ್ಕೆ ಆಗ್ರಹ
5 ವರ್ಷದ ಬಾಲಕಿ ಚೈತ್ರಾ ಸಾವಿಗೆ ಇಡೀ ಕೋಟೆಗಂಗೂರು ಗ್ರಾಮಸ್ಥರು ತೀವ್ರ ಕಂಬನಿ ಮಿಡಿದಿದ್ದು, ಜನರ ರಕ್ಷಣೆ ನೋಡಿಕೊಳ್ಳದ ರೈಲ್ವೆ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಕೋಟೆಗಂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಬಿ.ವಿಜಯ್‌ಕುಮಾರ್ ಅವರು ರೈಲ್ವೆ ಇಲಾಖೆ ಜನರ ಹಾಗೂ ಮಕ್ಕಳ ರಕ್ಷಣೆ ಆದ್ಯತೆ ನೀಡದ ಬೇಜಬ್ದಾರಿ ಗುತ್ತಿಗೆದಾರರಿಗೆ ಕೆಲಸ ನೀಡಿದ್ದು, ಅವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಹಾಗೂ ಮೃತ ಬಾಲಕಿ ಪೋಷಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

Leave A Reply

Your email address will not be published.

error: Content is protected !!