Hosanagara | ಕಳೆದ 3 ದಿನಗಳಿಂದ ನಾಪತ್ತೆಯಾಗಿದ್ದ ವೃದ್ಧೆ ಕೊನೆಗೂ ಪತ್ತೆ !

0 1,188

ಹೊಸನಗರ: ಕಳೆದ ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ಕರಿಮನೆ ಗ್ರಾಪಂ ವ್ಯಾಪ್ತಿಯ ಸಾದಗಲ್ ವೃದ್ಧೆ ಕೊನೆಗೂ ಪತ್ತೆಯಾಗಿದ್ದಾರೆ.

ಚನ್ನಪ್ಪಗೌಡ ಅವರ ಪತ್ನಿ ಶಾರದಮ್ಮ (85) ಕಾಣೆಯಾಗಿದ್ದರು. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತೋಟಕ್ಕೆ ದನಗಳು ಬಂದಿರಬಹುದೆಂದು ನೋಡಿಕೊಂಡು ಬರುವುದಾಗಿ ಹೇಳಿ ಶಾರದಮ್ಮ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳದಿದ್ದಾಗ ಮನೆಯವರು ತೋಟ, ಗದ್ದೆ, ಹಳ್ಳ, ಕೊಳ್ಳ, ಕಾಡಲ್ಲಿ ಹುಡುಕಾಡಿದ್ದಾರೆ. ಶಾರದಮ್ಮನ ಜೊತೆ ಹೋಗಿದ್ದ ಶ್ವಾನವೂ ಭಾನುವಾರ ಕಾಣಿಸಿರಲಿಲ್ಲ. ಆದರೆ ಶ್ವಾನ ಸೋಮವಾರ ಬೆಳಗ್ಗೆ ಪ್ರತ್ಯಕ್ಷವಾಗಿದೆ. ಆದರೆ ಶಾರದಮ್ಮನ ಸುಳಿವು ಸಿಗದ ಕಾರಣ ಕುಟುಂಬದವರಲ್ಲಿ ಆತಂಕ ಹೆಚ್ಚಾಗಿತ್ತು.

ಮಂಗಳವಾರ ಸಂಜೆ ಸಾದಗಲ್ ಗ್ರಾಮದಿಂದ 6 ಕಿ.ಮೀ. ದೂರದ ಕಬ್ಬಿನಹಿತ್ತಲು ಗ್ರಾಮದ ಕಾಡಿನಲ್ಲಿ ಯಾರೋ ಕಿರುಚುತ್ತಿರುವ ಶಬ್ದ ಕೇಳಿಬಂದಿದೆ. ಸ್ಥಳೀಯರು ಕಾಡಿಗೆ ಹೋಗಿ ನೋಡಿದಾಗ ಶಾರದಮ್ಮ ಪತ್ತೆಯಾಗಿದ್ದು, ಆರೋಗ್ಯವಾಗಿದ್ದಾರೆ. ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ಶಾರದಮ್ಮ ಸಿಗುತ್ತಿದ್ದಂತೆ ‘ನನಗೇನು ಆಗಿಲ್ಲ, ಯಾರು ಗಾಬರಿಯಾಗಬೇಡಿ ಕಾಲಿಗೆ ಇಂಬಳ ಹುಳು ಕಚ್ಚಿದೆಯಷ್ಟೇ’ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಏಕೆಂದರೆ ಕಳೆದ ಮೂರು ದಿನಗಳಿಂದ ಅನ್ನ ಆಹಾರವಿಲ್ಲದೇ ಇದ್ದರು.

ಇಂದು ಬೆಳಿಗ್ಗೆ ನಗರ ಠಾಣೆ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ಬದಲ್ಲಿ ಶ್ವಾನದಳ ಶೋಧಕಾರ್ಯ ನಡೆದಿತ್ತು. ಈ ಕಾರ್ಯಾಚರಣೆಯಲ್ಲಿ ಸ್ಥಳೀಯ ಗ್ರಾಮಸ್ಥರು ಸಾಥ್ ನೀಡಿದ್ದರು.

ಶ್ವಾನ ದಳದ ARSI ಚಂದ್ರಪ್ಪ, HC ಪ್ರಸನ್ನ, ಪೊಲೀಸ್ ಸಿಬ್ಬಂದಿಗಳಾದ HC ವೆಂಕಟೇಶ್, HC ಪ್ರವೀಣ್, HC ಮಂಜುನಾಥ್, ಶಾಂತಪ್ಪ, ವಿನಯಕುಮಾರ್, ಮಂಜುನಾಥ್, ಸುಜಯಕುಮಾರ್, ಅರಣ್ಯ ಇಲಾಖೆಯ ARFO ಗಳಾದ ಸತೀಶ್, ಅಮೃತ್ ಸುಂಕದ್, ಪ್ರವೀಣಕುಮಾರ್, ನರೇಂದ್ರಕುಮಾರ್, ಅರಣ್ಯ ರಕ್ಷಕರು ಸೇರಿದಂತೆ ಒಟ್ಟು ಮೂರು ಇಲಾಖೆಯಿಂದ ಜಂಟಿ‌ ಕಾರ್ಯಾಚರಣೆಯಲ್ಲಿ 30 ಕ್ಕೂ ಹೆಚ್ಚು ಸಿಬ್ಬಂದಿಗಳು ಭಾಗಿಯಾಗಿದ್ದರು.

Leave A Reply

Your email address will not be published.

error: Content is protected !!