ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಲೋಪ, ಹಣದ ಬೇಡಿಕೆ ಆರೋಪ ; ತಾಪಂ ಇಒ ಅಮಾನತಿಗೆ ದಸಂಸ ಆಗ್ರಹ

0 664

ಹೊಸನಗರ: ಜಲಜೀವನ್ ಮಿಷನ್ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ತಾಲೂಕು ಪಂಚಾಯಿತಿ ಆಡಳಿತ ಲೋಪ ಎಸಗಿದೆ. ಈ ಕಾರಣಕ್ಕೆ ತಾಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ತನಿಖೆ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕೆ.ವಿ.ನಾಗರಾಜ ಅರಳಸುರಳಿ ಆರೋಪಿಸಿದ್ದಾರೆ.

ಅವರು ಮಂಗಳವಾರ ತಹಸೀಲ್ದಾರ್ ಕಛೇರಿಗೆ ಮನವಿ ಸಲ್ಲಿಸಿ, ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಘಟಕಗಳಲ್ಲಿ ಈವರೆಗೂ ಫಿಲ್ಟರ್ ಅಳವಡಿಸಿಲ್ಲ. ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ದೃಷ್ಠಿಯಿಂದ ಕೈಗೊಂಡ ಯೋಜನೆಯು ತಾಲೂಕು ಪಂಚಾಯಿತಿ ಕಾರ‍್ಯನಿರ್ವಹಣಾಧಿಕಾರಿ ಹಾಗೂ ಇಲಾಖೆಯ ಇಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ಹಳ್ಳ ಹಿಡಿದಿದೆ. ಅಲ್ಲದೇ ಯೋಜನೆಯ ಅನುಷ್ಠಾನದಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆದಿದೆ ಎಂದು ಆರೋಪಿಸಿದರು.

ಎನ್‌ಆರ್‌ಎಲ್‌ಎಂ ಯೋಜನೆಯಡಿ ಕಾರ‍್ಯನಿರ್ವಹಣಾಧಿಕಾರಿ ಅನಗತ್ಯವಾಗಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ಸಂಜೀವನಿ ಸ್ವಸಹಾಯ ಸಂಘಗಳ ಸದಸ್ಯರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಹಲವು ಸಂಘಗಳಿಗೆ ಉದ್ದೇಶಪೂರ್ವಕವಾಗಿ ತಾಂತ್ರಿಕ ಸಹಕಾರ ನೀಡುತ್ತಿಲ್ಲ. ಇದರಿಂದ ಸಂಘದ ಸದಸ್ಯರಿಗೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿದರು.

ತಾಲೂಕಿನಲ್ಲಿ ನರೇಗಾ ಯೋಜನೆಯ ಅನುಷ್ಠಾನ ಸಮರ್ಪಕವಾಗಿ ನಡೆಯುತ್ತಿಲ್ಲ. ವಯೋವೃದ್ಧರನ್ನು ಸಹ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ವೇಳೆ ಸರಕಾರದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಅಲ್ಲದೇ ತಮ್ಮ ಇಲಾಖೆಗೆ ಸಂಬಂಧಪಡದ ಇಲಾಖೆಗಳಲ್ಲಿಯೂ ಕಾರ‍್ಯನಿರ್ವಹಣಾಧಿಕಾರಿ ಹಸ್ತಕ್ಷೇಪ ಮಾಡುತ್ತಿದ್ದು, ಹಣ ನೀಡುವಂತೆ ಕಿರುಕುಳ ನೀಡುತ್ತಿರುವ ಆರೋಪಗಳು ಕೇಳಿಬಂದಿವೆ ಎಂದು ಆಪಾದಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇದನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ‍್ಯವಾಗಲಿದೆ ಎಂದು ಅವರು ತಿಳಿಸಿದ ಅವರು, ಉಪತಹಸೀಲ್ದಾರ್ ಸುಧೀಂದ್ರಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಮನವಿ ನೀಡುವ ಸಂದರ್ಭಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಬಿ.ಎಂ ಪ್ರಕಾಶ್, ಪದಾಕಾರಿಗಳಾದ ಪ್ರಕಾಶ, ಅಣ್ಣಪ್ಪ, ಹರೀಶ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!